×
Ad

ಬಿಜೆಪಿ ಶಾಸಕನಿಗೆ ಥಳಿಸಿದ ರೈತರ ಗುಂಪು: ಆರೋಪ

Update: 2021-03-27 21:22 IST
Photo source: Twitter

ಚಂಡಿಗಡ: ಪಂಜಾಬ್‌ನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕನನ್ನು ಮುಕ್ತಸರ್ ಜಿಲ್ಲೆಯ ಮಾಲೌಟ್‌ನಲ್ಲಿ ಶನಿವಾರ ರೈತರ ಗುಂಪೊಂದು ಥಳಿಸಿ ಅವರ ಅಂಗಿಯನ್ನು ಹರಿದು ಹಾಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಬೋಹರ್ ಶಾಸಕ ಅರುಣ್ ನಾರಂಗ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲು ಮಾಲೌಟ್‌ಗೆ ಹೋಗಿದ್ದರು, ಇದನ್ನು ರೈತರು ತೀವ್ರವಾಗಿ ವಿರೋಧಿಸಿದರು.

ಸ್ಥಳದಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಅಧಿಕಾರಿಗಳು ನಾರಂಗ್ ಅವರನ್ನು ಸುರಕ್ಷಿತವಾಗಿ ಕರೆದೊಯ್ದರು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಮಾಲೌಟ್) ಜಸ್ಪಾಲ್ ಸಿಂಗ್ ಹೇಳಿದ್ದಾರೆ.

ಕೆಲವು ಜನರು ನನಗೆ ಥಳಿಸಿದ್ದಾರೆ. ಕಪ್ಪು ಬಣ್ಣದ ದ್ರವವನ್ನು ಸಹ ನನ್ನ ಮೇಲೆ ಎಸೆದಿದ್ದಾರೆ ಎಂದು ನಾರಂಗ್ ಆರೋಪಿಸಿದ್ದಾರೆ.

ಹಲ್ಲೆಯನ್ನು ಖಂಡಿಸಿದ ಕಿಸಾನ್ ಮೋರ್ಚಾ:

ಪಂಜಾಬ್ ನಲ್ಲಿ ಬಿಜೆಪಿ ಶಾಸಕನ ಮೇಲೆ ನಡೆದಿರುವ ದೈಹಿಕ ಹಲ್ಲೆಯನ್ನು ಖಂಡಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದೆ.

''ರೈತರ ಆಂದೋಲನವು ಪ್ರತಿಕೂಲ ಪರಿಸ್ಥಿತಿಗಳಲ್ಲಿ ಹಿಂಸಾತ್ಮಕವಾಗಿ ತಿರುಗಿದೆ ಮತ್ತು ಶಾಸಕರನ್ನು ದೈಹಿಕವಾಗಿ ಹಲ್ಲೆ ಮಾಡಲಾಗಿದೆ. ಚುನಾಯಿತ ಪ್ರತಿನಿಧಿಯೊಂದಿಗೆ ಈ ರೀತಿ ನಡೆದುಕೊಂಡಿದ್ದು ವಿಷಾದದ ಸಂಗತಿ. ಅಂತಹ ನಡವಳಿಕೆಯನ್ನು ನಾವು ಪ್ರೋತ್ಸಾಹಿಸುವುದಿಲ್ಲ. ಈ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ'' ಎಂದಿದೆ.

ಆದರೆ, ಈ ಘಟನೆಗೆ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳೇ ಕಾರಣ ಎಂದು ನಾವು ಪರಿಗಣಿಸುತ್ತೇವೆ. ಬಿಜೆಪಿಯ ಕೇಂದ್ರ ನಾಯಕತ್ವದಲ್ಲಿ ಅಹಂಕಾರ ಆಳವಾಗಿ ಬೇರೂರಿದೆ. ರೈತರ ಸಮಸ್ಯೆಗಳನ್ನು ಪರಿಹರಿಸುವ ಬದಲು ಅವರು ಚುನಾವಣೆಗಳಲ್ಲಿ ನಿರತರಾಗಿದ್ದಾರೆ, ಆದರೆ ಕೇಂದ್ರ ಸರಕಾರದ ಈ ನಡವಳಿಕೆಯ ಕಹಿ ಫಲಿತಾಂಶಗಳನ್ನು ಸ್ಥಳೀಯ ನಾಯಕರು ಎದುರಿಸುತ್ತಿದ್ದಾರೆ ಎಂದು ಕಿಸಾನ್ ಮೋರ್ಚಾ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News