×
Ad

ವಿಶ್ವಸಂಸ್ಥೆ ಶಾಂತಿ ಪಾಲಕರಿಗೆ 2 ಲಕ್ಷ ಕೋವಿಡ್ ಲಸಿಕೆ ದೇಣಿಗೆ

Update: 2021-03-27 22:19 IST

ವಿಶ್ವಸಂಸ್ಥೆ (ನ್ಯೂಯಾರ್ಕ್), ಮಾ. 27: ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಸದಸ್ಯರಿಗೆ 2 ಲಕ್ಷ ಕೋವಿಡ್-19 ಲಸಿಕಾ ಡೋಸ್‌ಗಳನ್ನು ಉಡುಗೊರೆಯಾಗಿ ನೀಡಿರುವುದಕ್ಕೆ ಶಾಂತಿಪಾಲನಾ ಪಡೆಯ ಮುಖ್ಯಸ್ಥ ಸೇರಿದಂತೆ ವಿಶ್ವಸಂಸ್ಥೆಯ ಅಧಿಕಾರಿಗಳು ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಭಾರತದ ಈ ದೇಣಿಗೆಯು ಶಾಂತಿಪಾಲನಾ ಪಡೆಯ ಸೈನಿಕರು ಜೀವ ಉಳಿಸುವ ತಮ್ಮ ಕೆಲಸವನ್ನು ಸುರಕ್ಷಿತವಾಗಿ ಮುಂದುವರಿಸಿಕೊಂಡು ಹೋಗಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಸದಸ್ಯರಿಗೆ ಉಡುಗೊರೆಯಾಗಿ ಭಾರತ ಘೋಷಿಸಿರುವ 2 ಲಕ್ಷ ಡೋಸ್ ಲಸಿಕೆಯನ್ನೊಳಗೊಂಡ ಸರಕು ಶನಿವಾರ ಮುಂಜಾನೆ ಮುಂಬೈನಿಂದ ಹೊರಟಿದೆ. ಅದು ಡೆನ್ಮಾರ್ಕ್ ದೇಶದ ರಾಜಧಾನಿ ಕೋಪನ್‌ಹೇಗನ್ ತಲುಪಲಿದೆ. ಅಲ್ಲಿ ಲಸಿಕೆಯನ್ನು ಎಲ್ಲ ವಿಶ್ವಸಂಸ್ಥೆ ಶಾಂತಿಪಾಲನಾ ಘಟಕಗಳಿಗೆ ವಿತರಿಸಲಾಗುವುದು.

ಲಸಿಕೆ ರೂಪದಲ್ಲಿ ಭಾರತ ನೀಡಿರುವ ದೇಣಿಗೆಗೆ ವಿಶ್ವಸಂಸ್ಥೆ ಶಾಂತಿ ಕಾರ್ಯಾಚರಣೆಯ ಅಧೀನ ಮಹಾಕಾರ್ಯದರ್ಶಿ ಜೀನ್ ಪಿಯರಿ ಲ್ಯಾಕ್ರೋಯಿಕ್ಸ್ ಮತ್ತು ವಿಶ್ವಸಂಸ್ಥೆಯ ಬೆಂಬಲ ಕಾರ್ಯಾಚರಣೆಯ ಅಧೀನ ಮಹಾಕಾರ್ಯದರ್ಶಿ ಅತುಲ್ ಖಾರೆ ಶುಕ್ರವಾರ ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News