×
Ad

ಇವಿಎಂ ಬಗ್ಗೆ ಟಿಎಂಸಿ ಅಭ್ಯರ್ಥಿ ಆಕ್ಷೇಪ: ಬಿಜೆಪಿ ತಿರುಗೇಟು

Update: 2021-03-27 23:04 IST
ಸಾಂದರ್ಭಿಕ ಚಿತ್ರ

ಕೋಲ್ಕತಾ, ಮಾ.27: ವಿದ್ಯುನ್ಮಾನ ಮತಯಂತ್ರ(ಇವಿಎಂ)ದ ಬಗ್ಗೆ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಸೊಹಾಮ್ ಚಕ್ರವರ್ತಿ ಆಕ್ಷೇಪ ಎತ್ತಿದ್ದಾರೆ. ಟಿಎಂಸಿ ಅಭ್ಯರ್ಥಿಗಳ ಹೆಸರಿನ ಎದುರಿಗಿದ್ದ ಬಟನ್ ಒತ್ತಿದರೂ ಮತಗಳು ಬಿಜೆಪಿ ಅಭ್ಯರ್ಥಿಯ ಹೆಸರಿಗೆ ಚಲಾವಣೆಯಾಗಿರುವ ಸಂಶಯವಿದೆ ಎಂದವರು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಪ.ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಸೋಲು ಖಾತರಿಯಾಗುತ್ತಿದ್ದಂತೆ ಟಿಎಂಸಿ ಇವಿಎಂ ಅನ್ನು ದೂರತೊಡಗಿದೆ ಎಂದು ಟೀಕಿಸಿದ್ದಾರೆ. ಪ.ಬಂಗಾಳದ ಈಸ್ಟ್ ಮೇದಿನಿಪುರ ಜಿಲ್ಲೆಯ ಭಗವಾನ್‌ಪುರ ಕ್ಷೇತ್ರದಲ್ಲಿ ಮತದಾನ ಆರಂಭಕ್ಕೂ ಒಂದು ಗಂಟೆ ಮೊದಲು ಹಿಂಸಾಚಾರದ ಘಟನೆ ನಡೆದಿದೆ. ಬಾಂಬ್‌ಗಳನ್ನು ಎಸೆಯಲಾಗಿದೆ ಮತ್ತು ಗುಂಡು ಹಾರಿಸಿದ ಘಟನೆಯಲ್ಲಿ ಓರ್ವ ಭದ್ರತಾ ಸಿಬಂದಿ ಗಾಯಗೊಂಡಿದ್ದಾನೆ.

ಹಿಂಸಾಚಾರಕ್ಕೆ ಟಿಎಂಸಿ ಕಾರಣ ಎಂದು ಬಿಜೆಪಿ ಮುಖಂಡ ಸಮೀದ್ ದಾಸ್ ಆರೋಪಿಸಿದ್ದಾರೆ. ಶನಿವಾರ ಮತದಾನ ನಡೆದ 30 ಕ್ಷೇತ್ರಗಳಲ್ಲಿ ಬಿಜೆಪಿ 29ರಲ್ಲಿ, ಅಖಿಲ ಭಾರತ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟ 1 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಅಸ್ಸಾಂನಲ್ಲಿ ಮುಖ್ಯಮಂತ್ರಿ ಸೊನೊವಾಲ್ ದಿಬ್ರುಗಢ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಮಜುಲಿ ಕ್ಷೇತ್ರದಿಂದ ಮರು ಆಯ್ಕೆ ಬಯಸಿರುವ ಸೊನೊವಾಲ್‌ಗೆ ಈ ಬಾರಿ ಕಾಂಗ್ರೆಸ್‌ನ ರಜೀಬ್ ಲೊಚಾನ್ ಪೆಗು ಅವರಿಂದ ಕಠಿಣ ಪೈಪೋಟಿ ಎದುರಾಗಿದೆ. ನಿರ್ಗಮಿತ ಸ್ಪೀಕರ್ ಹಿತೇಂದ್ರನಾಥ್ ಗೋಸ್ವಾಮಿ, ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ರಿಪುನ್ ಬೋರಾ, ಸಾಮಾಜಿಕ ಕಾರ್ಯಕರ್ತ ಅಖಿಲ್ ಗೊಗೋಯ್(ಜೈಲಿನಿಂದಲೇ ಸ್ಫರ್ಧಿಸುತ್ತಿದ್ದಾರೆ) ಅವರ ರಾಜಕೀಯ ಭವಿಷ್ಯವೂ ಇಂದಿನ ಮತದಾನದಲ್ಲಿ ನಿರ್ಧಾರವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News