ಸೂಯೆಝ್ ತೆರವು ಕಾರ್ಯದಲ್ಲಿ ನೆರವು ನೀಡಲು ಸಿದ್ಧ: ಅಮೆರಿಕ
Update: 2021-03-27 23:05 IST
ವಾಶಿಂಗ್ಟನ್, ಮಾ. 27: ಯುರೋಪ್ ಮತ್ತು ಏಶ್ಯ ಖಂಡಗಳನ್ನು ಜೋಡಿಸುವ ಪ್ರಮುಖ ಜಲಮಾರ್ಗ ಸೂಯೆಝ್ ಕಾಲುವೆಯಲ್ಲಿ ಅಡ್ಡಲಾಗಿ ಸಿಲುಕಿಕೊಂಡಿರುವ ಬೃಹತ್ ಕಂಟೇನರ್ ಹಡಗನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಈಜಿಪ್ಟ್‌ಗೆ ನೆರವು ನೀಡಲು ಸಿದ್ಧವಿರುವುದಾಗಿ ಅಮೆರಿಕ ಶುಕ್ರವಾರ ಹೇಳಿದೆ.
ಬೇಡಿಕೆ ಬಂದರೆ ಅಮೆರಿಕ ನೌಕಾಪಡೆಯ ಪರಿಣತರ ತಂಡವೊಂದನ್ನು ಹಡಗನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ನಿಯೋಜಿಸಬಹುದಾಗಿದೆ ಎಂದು ಶ್ವೇತಭವನದ ವಕ್ತಾರೆ ಜೆನ್ ಸಾಕಿ ಹೇಳಿದರು.
‘‘ಈಜಿಪ್ಟ್‌ನೊಂದಿಗೆ ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳನ್ನು ನಡೆಸಲಾಗಿದೆ. ಸೂಯೆಝ್ ಕಾಲುವೆಯನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ನೆರವು ನೀಡಲು ನಾವು ಸಿದ್ಧರಿದ್ದೇವೆ ಎನ್ನುವುದನ್ನು ಅವರಿಗೆ ತಿಳಿಸಲಾಗಿದೆ’’ ಎಂದು ಹೇಳಿದ ಅವರು, ‘‘ಈ ನಿಟ್ಟಿನಲ್ಲಿ ಮಾತುಕತೆಗಳು ಮುಂದುವರಿದಿವೆ’’ ಎಂದರು.