ಓರ್ಲಿಯನ್ಸ್ ಮಾಸ್ಟರ್ಸ್ : ಸೈನಾ ನೆಹ್ವಾಲ್ ಹೊರಕ್ಕೆ
ಪ್ಯಾರಿಸ್, ಮಾ.27: ಓರ್ಲಿಯನ್ಸ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಭಾರತದ ಸೈನಾ ನೆಹ್ವಾಲ್ ಸೋಲನುಭವಿಸಿದ್ದಾರೆ.
ಇದೇ ವೇಳೆ ಕೃಷ್ಣ ಪ್ರಸಾದ್ ಗರಗಾ ಮತ್ತು ವಿಷ್ಣು ವರ್ಧನ್ ಗೌಡ್ ಪಂಜಲಾ ಜೋಡಿ ಪುರುಷರ ಡಬಲ್ಸ್ ಫೈನಲ್‌ಪ್ರವೇಶಿಸಿದೆ. ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ವಿಜೇತೆ ಸೈನಾ 28 ನಿಮಿಷಗಳಲ್ಲಿ 17-21, 17-21ರಲ್ಲಿ ಡೆನ್ಮಾರ್ಕ್‌ನ ಲೈನ್ ಕ್ರಿಸ್ಟೋಫರ್ಸನ್ ವಿರುದ್ಧ ಸೋಲು ಅನುಭವಿಸಿದರು. ಮಹಿಳಾ ಡಬಲ್ಸ್‌ನ ಸೆಮಿಫೈನಲ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್.ಸಿಕ್ಕಿ ರೆಡ್ಡಿ 12-18, 9-21 ಅಂತರದಲ್ಲಿ ಅಗ್ರ ಶ್ರೇಯಾಂಕಿತ ಥಾಯ್ಲೆಂಡ್‌ನ ಜೋಡಿ ಜೊಂಗ್ಕೋಲ್ಫಾನ್ ಕಿಥರಕುಲ್ ಮತ್ತು ರವೀಂಡಾ ಪ್ರಜೊಂಗ್‌ಜೈ ವಿರುದ್ಧ ಸೋಲು ಅನುಭವಿಸಿದರು.
ಕೃಷ್ಣ ಮತ್ತು ವಿಷ್ಣು 35 ನಿಮಿಷಗಳ ಸೆಮಿಫೈನಲ್ ಹಣಾಹಣಿಯಲ್ಲಿ ಇಂಗ್ಲೆಂಡ್‌ನ ಕ್ಯಾಲಮ್ ಹೆಮ್ಮಿಂಗ್ ಮತ್ತು ಸ್ಟೀವನ್ ಸ್ಟಾಲ್ವುಡ್ ವಿರುದ್ಧ 21-17, 21-17 ಅಂತರದಿಂದ ಜಯ ಗಳಿಸಿದರು.
ಈ ವರ್ಷ ತಮ್ಮ ಮೊದಲ ಪಂದ್ಯವನ್ನು ಒಟ್ಟಿಗೆ ಆಡುತ್ತಿರುವ ಇವರು ಫೈನಲ್‌ನಲ್ಲಿ ಇಂಡೋನೇಶ್ಯದ ಸಬರ್ ಕರ್ಯಾಮನ್ ಗುಟಮಾ ಮತ್ತು ಮೊಹ್ ರೆಜಾ ಪಹ್ಲೆವಿ ಇಸ್ಫಾಹಾನಿ ಅಥವಾ ನಾಲ್ಕನೇ ಶ್ರೇಯಾಂಕದ ಇಂಗ್ಲೆಂಡ್‌ನ ಬೆನ್ ಲೇನ್ ಮತ್ತು ಸೀನ್ ವೆಂಡಿ ಅವರನ್ನು ಎದುರಿಸಲಿದ್ದಾರೆ.
21ರ ಹರೆಯದ ಕೃಷ್ಣ ಭಾರತದ ನಂ. 1 ಶ್ರೇಯಾಂಕದ ಡಬಲ್ಸ್ ಆಟಗಾರ. ಅವರು ಮೊದಲು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಜೊತೆಗಿದ್ದರು.
ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿ ಜೋಡಿಯಾಗಿರುವ ನಂತರ ಕೃಷ್ಣ ಅವರು 2016ರ ನವೆಂಬರ್‌ನಲ್ಲಿ ಧ್ರುವ್ ಕಪಿಲಾ ಅವರೊಂದಿಗೆ ಆಟವಾಡಲು ಪ್ರಾರಂಭಿಸಿದರು. ಈ ಜೋಡಿ 2019ರ ತನಕ ಒಟ್ಟಿಗೆ ಆಡಿತ್ತು. 20ರ ಹರೆಯದ ವಿಷ್ಣು ಮತ್ತು ಇಶಾನ್ ಭಟ್ನಾಗರ್ 2019ರ ಬಲ್ಗೇರಿಯನ್ ಜೂನಿಯರ್ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಫೈನಲ್ ತಲುಪಿದ್ದರು.