"ಧೋನಿ, ಗಿಲ್‌ಕ್ರಿಸ್ಟ್ ಅವರನ್ನೂ ಹಿಂದಿಕ್ಕಲಿದ್ದಾರೆ ಭಾರತದ ಈ ಯುವ ಕ್ರಿಕೆಟರ್"

Update: 2021-03-28 04:19 GMT

ಹೊಸದಿಲ್ಲಿ, ಮಾ.28: ಭಾರತ ತಂಡದ ಯುವ ಪ್ರತಿಭಾವಂತ ವಿಕೆಟ್ ಕೀಪರ್ ರಿಷಬ್ ಪಂತ್ ಇದೇ 'ಫಾರ್ಮ್' ಮುಂದುವರಿಸಿದರೆ ಎಂ.ಎಸ್.ಧೋನಿ, ಆ್ಯಡಂ ಗಿಲ್‌ಕ್ರಿಸ್ಟ್ ಅವರನ್ನು ಕೂಡಾ ಹಿಂದಿಕ್ಕಿಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಝಮಾಮ್ ಉಲ್ ಹಕ್ ಭವಿಷ್ಯ ನುಡಿದಿದ್ದಾರೆ.

ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತ ತಂಡಕ್ಕೆ ಮರಳಿದ ಪಂತ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಒಟ್ಟು ಆರು ಟೆಸ್ಟ್ ಪಂದ್ಯಗಳಲ್ಲಿ ನಾಲ್ಕು ಅರ್ಧಶತಕ ಮತ್ತು ಒಂದು ಶತಕ ಸಿಡಿಸಿದ್ದ ಪಂತ್, ಇಂಗ್ಲೆಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 40 ಎಸೆತಗಳಲ್ಲಿ 77 ರನ್ ಬಾರಿಸಿದ್ದರು.

ಈ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದರೂ, ಕಳೆದ ಕೆಲ ತಿಂಗಳಿನಿಂದ ಪಂತ್ ಅವರ ಯಶಸ್ಸು ಅದ್ಭುತ ಎಂದು ಅವರು ಬಣ್ಣಿಸಿದ್ದಾರೆ. 23 ವರ್ಷದ ಈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ತಮ್ಮ ಬತ್ತಳಿಕೆಯಲ್ಲಿ ಹಲವು ಹೊಡೆತಗಳ ಅಸ್ತ್ರ ಹೊಂದಿದ್ದಾರೆ. ಇದೇ ಸಾಧನೆ ಮುಂದುವರಿಸಿದಲ್ಲಿ ಅವರು, ವಿಶ್ವ ಕಂಡ ಅತಿಶ್ರೇಷ್ಠ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್‌ಗಳನ್ನು ಸುಲಭವಾಗಿ ಹಿಂದಿಕ್ಕಬಹುದು" ಎಂದು ಹೇಳಿದರು.

"ಭಾರತದ ಕೆಳಕ್ರಮಾಂಕದ ಬ್ಯಾಟಿಂಗ್‌ಗೆ ಬಲ ನೀಡಿದವರು ಪಂತ್. ಅವರ ಕಾರಣದಿಂದ ಭಾರತದ ರನ್‌ರೇಟ್ ಗಗನಕ್ಕೇರಿತು. ನಾನು ಆರೇಳು ತಿಂಗಳಿಂದ ಅವರ ಬ್ಯಾಟಿಂಗ್ ನೋಡುತ್ತಿದ್ದೇನೆ. ಅವರು ಬ್ಯಾಟಿಂಗ್ ಮಾಡುವ ಶೈಲಿ ಮತ್ತು ವಿವಿಧ ಕ್ರಮಾಂಕದಲ್ಲಿ ಅವರು ರನ್ ಗಳಿಸುತ್ತಿರುವುದು ನಿಜಕ್ಕೂ ಅದ್ಭುತ" ಎಂದು ಯೂಟ್ಯೂಬ್ ಚಾನಲ್‌ನಲ್ಲಿ ಹೇಳಿದ್ದಾರೆ.

"ಕಳೆದ 30-35 ವರ್ಷಗಳಲ್ಲಿ ನಾನು ಇಬ್ಬರು ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ಗಳನ್ನು ನೋಡಿದ್ದೇನೆ. ಧೋನಿ ಹಾಗೂ ಗಿಲ್‌ಕ್ರಿಸ್ಟ್. ಈ ಇಬ್ಬರೂ ಪಂದ್ಯವನ್ನು ಬದಲಿಸುವ ಸಾಮರ್ಥ್ಯ ಹೊಂದಿದ್ದರು. ರಿಷಬ್ ಪಂತ್ ಇದೇ ಸಾಧನೆ ಮುಂದುವರಿಸಿದರೆ, ಈ ಇಬ್ಬರನ್ನು ಭಾರಿ ಅಂತರದಿಂದ ಹಿಂದಿಕ್ಕಬಹುದು" ಎಂದು ಭವಿಷ್ಯ ನುಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News