ಉಡುಪಿ: ಸರಳವಾಗಿ ಪಾಮ್ ಸಂಡೆ ಆಚರಣೆ
ಉಡುಪಿ, ಮಾ.28: ಕೊರೋನ ಎರಡನೇ ಅಲೆಯ ಆತಂಕದ ನಡುವೆ ಯೇಸು ಸ್ವಾಮಿ ಜೆರುಸಲೇಂ ನಗರವನ್ನು ಪ್ರವೇಶಿಸಿದ ಸಂಕೇತವಾಗಿ ಆಚರಿಸುವ ಗರಿಗಳ ರವಿವಾರ(ಪಾಮ್ ಸಂಡೆ)ಯನ್ನು ಉಡುಪಿ ಜಿಲ್ಲೆಯಾದ್ಯಂತ ಕ್ರೆಸ್ತರು ಶ್ರದ್ಧಾಭಕ್ತಿಯಿಂದ ಸರಳವಾಗಿ ಆಚರಿಸಿದರು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ, ಕಳತ್ತೂರು ನಿತ್ಯ ಸಹಾಯ ಮಾತೆಯ ಇಗರ್ಜಿಯಲ್ಲಿ ನಡೆದ ಧಾರ್ಮಿಕ ವಿಧಿವಿಧಾನದಲ್ಲಿ ಭಾಗವಹಿಸಿದರು. ಈ ವೇಳೆ ಚರ್ಚ್‌ನ ಪ್ರಧಾನ ಧರ್ಮಗುರು ವಂ.ಲೊರೇನ್ಸ್ ಬಿ.ಡಿಸೋಜ ಮತ್ತು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಚೇತನ್ ಲೋಬೊ ಉಸ್ಥಿತರಿದ್ದರು.
ಉಡುಪಿ ಜಿಲ್ಲೆಯ ಎಲ್ಲ ಚರ್ಚ್‌ಗಳಲ್ಲಿ ಕ್ರೆಸ್ತರು ಬೆಳಗ್ಗಿನ ಪ್ರಾರ್ಥನಾ ವಿಧಿಯಲ್ಲಿ ಪಾಲ್ಗೊಂಡು ತೆಂಗಿನ ಗರಿಗಳನ್ನು ಹಿಡಿದುಕೊಂಡು ಯೇಸುವಿನ ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡು ಬಲಿಪೂಜೆಯಲ್ಲಿ ಭಾಗವಹಿಸಿದರು. ಕೊರೋನಾ ಹಿನ್ನಲೆಯಲ್ಲಿ ಸರಕಾರದ ನಿಯಮಾವಳಿಗಳ ಹಿನ್ನಲೆಯಲ್ಲಿ ಸಾರ್ವಜನಿಕ ಮೆರವಣಿಗೆಗಳನ್ನು ರದ್ದುಪಡಿಸಲಾಗಿತ್ತು.
ಚರ್ಚಿಗೆ ಆಗಮಿಸುವ ಪ್ರತಿಯೊಬ್ಬರಿಗೂ ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಕಡ್ಡಾಯಗೊಳಿಸಲಾಗಿತ್ತು. ಸುರಕ್ಷಿತ ಅಂತರವನ್ನು ಕಾಯ್ದುಕೊಂಡು ಬಲಿಪೂಜೆ ಯಲ್ಲಿ ಭಾಗಹಿಸಲು ಅವಕಾಶ ಮಾಡಿಕೊಡಲಾಗಿತ್ತು.
ಧರ್ಮಪ್ರಾಂತ್ಯದ ಪ್ರಧಾನ ದೇವಾಲಯವಾದ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ದೇವಾಲಯದ ಪ್ರಧಾನ ಧರ್ಮಗುರು ವಂ. ವಲೇರಿಯನ್ ಮೆಂಡೊನ್ಸಾ ಧಾರ್ಮಿಕ ವಿಧಿವಿಧಾನದ ನೇತೃತ್ವ ವಹಿಸಿದ್ದರು. ಕೊಳಲಗಿರಿ ಸೆಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಬಲಿಪೂಜೆಯನ್ನು ಪ್ರಧಾನ ಗುರುಗಳಾಗಿ ವಂ.ರೋಮನ್ ಮಸ್ಕರೆನ್ಹಸ್ ಹಾಗೂ ಸಹ ಯಾಜಕರಾಗಿ ವಂ.ಅನಿಲ್ ಪ್ರಕಾಶ್ ಕ್ಯಾಸ್ತೆಲಿನೋ ನೆರವೇರಿಸಿದರು. ಪಾಮ್ ಸಂಡೆ ಆಚರಣೆಯೊಂದಿಗೆ ಕ್ರೆಸ್ತರ ಪವಿತ್ರ ಸಪ್ತಾಹ ಆರಂಭಗೊಳ್ಳುತ್ತದೆ.
ಪವಿತ್ರ ಸಪ್ತಾಹವು ಕ್ರೆಸ್ತರಿಗೆ ಅತಿ ಮಹತ್ವದಾಗಿದ್ದು, ಗುರುವಾರ ಯೇಸುಕ್ರಿಸ್ತರು ಕೊನೆಯ ಭೋಜನ ಸ್ಮರಣೆ ಮಾಡಿದ್ದರೆ, ಶುಕ್ರವಾರ ಯೇಸುಕ್ರಿಸ್ತರ ಮರಣದ ದಿನವಾದ ಗುಡ್ ಫ್ರೆಡೆ ಆಚರಿಸಿ ಇಡೀ ದಿನವನ್ನು ಉಪವಾಸ, ಧ್ಯಾನದಲ್ಲಿ ಕಳೆಯುತ್ತಾರೆ. ಶನಿವಾರ ಈಸ್ಟರ್ ಜಾಗರಣೆ ಮತ್ತು ಭಾನುವಾರ ಯೇಸುಕ್ರಿಸ್ತರ ಪುನರುತ್ಥಾನದ ಪ್ರಯುಕ್ತ ಈಸ್ಟರ್ ಹಬ್ಬ ಆಚರಿಸಲಾಗುತ್ತದೆ.