ಜೆಪ್ಪು-ಮೋರ್ಗನ್‌ಗೇಟ್ ಸಂಪರ್ಕ ರಸ್ತೆ ಕಾಮಗಾರಿಗೆ ಚಾಲನೆ
ಮಂಗಳೂರು, ಮಾ.28: ಸರಕಾರದಿಂದ ಸಿಗುವ ಅನುದಾನವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವುದರ ಜೊತೆಗೆ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಮಾಡುವ ಮೂಲಕ ಜನಸಾಮಾನ್ಯರಿಗೆ ಉಪಯೋಗವಾಗಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ನಗರದ ಜೆಪ್ಪುಮಹಾಕಾಳಿ ಪಡ್ಪುಬಳಿ ಸ್ಮಾರ್ಟ್ ಸಿಟಿ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ 66ರ ಜೆಪ್ಪುವಿನಿಂದ ಮೋರ್ಗನ್ಸ್ಗೇಟ್ ಜಂಕ್ಷನ್‌ವರೆಗೆ ಮಹಾಕಾಳಿಪಡ್ಪುಆರ್‌ಯುಬಿ ಮುಖಾಂತರ ಸಂಪರ್ಕ ರಸ್ತೆ ನಿರ್ಮಿಸುವ ಕಾಮಗಾರಿಗೆ ರವಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕಾಮಗಾರಿಯನ್ನು 49.95 ಕೋ.ರೂಗಳಲ್ಲಿ ಕೈಗೊಳ್ಳಲಾಗುತ್ತಿದೆ. ರಸ್ತೆಯು ಸುಮಾರು 4.50 ಮೀನಿಂದ 6.0 ಮೀ.ಅಗಲವಿರಲಿದೆ. ಪ್ರತಿದಿನ ಹಲವಾರು ಘನ ವಾಹನಗಳು ಹಾಗೂ ಇತರ ವಾಹನಗಳು ಸಂಚರಿಸುತ್ತಿದ್ದು ರಸ್ತೆಯು ತುಂಬಾ ಕಿರಿದಾಗಿರುವುದರಿಂದ ವಾಹನ ದಟ್ಟಣೆ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ರಸ್ತೆಯನ್ನು 18 ಮೀ.ಅಗಲಕ್ಕೆ ವಿಸ್ತರಿಸಿ ನಾಲ್ಕು ಪಥದ ಕಾಂಕ್ರಿಟ್ ರಸ್ತೆ, ದಾರಿದೀಪಗಳು, ಎರಡು ಕಡೆಗಳಲ್ಲಿ ಮಳೆ ನೀರು ಚರಂಡಿ ರಚನೆ, ತಗ್ಗುಪ್ರದೇಶದಲ್ಲಿ ಆರ್‌ಸಿಸಿ ತಡೆಗೋಡೆ ಸಹಿತ ಅಭಿವೃದ್ಧಿ ಕಾಮಗಾರಿ ಯನ್ನು ಕೈಗೊಳ್ಳುವುದರೊಂದಿಗೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ನಳಿನ್ ಕುಮಾರ್ ಕಟೀಲ್ ನುಡಿದರು.
ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿದರು.
ಈ ಸಂದರ್ಭ ಉಪಮೇಯರ್ ಸುಮಂಗಳ ರಾವ್, ಕಾರ್ಪೊರೇಟರ್‌ಗಳಾದ ಭಾನುಮತಿ, ಶೈಲೇಶ್ ಶೆಟ್ಟಿ, ಪಾಲಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು.