ಫುಡ್ ಡೆಲಿವರಿ ಆ್ಯಪ್ ನ ಉದ್ಯೋಗಿಗೆ ಎನ್‌ಐಎ ಅಧಿಕಾರಿಗಳಿಂದ ಚಿತ್ರಹಿಂಸೆ: ಆರೋಪ

Update: 2021-03-28 16:02 GMT

ಹೊಸದಿಲ್ಲಿ,ಮಾ.28: ಜಮ್ಮುವಿನಲ್ಲಿ ಫುಡ್ ಡೆಲಿವರಿ ಆ್ಯಪ್ ನ ಉದ್ಯೋಗಿಗೆ ಎನ್ಐಎ ಅಧಿಕಾರಿಯೋರ್ವರು ಚಿತ್ರಹಿಂಸೆ ನೀಡಿದ್ದಾರೆ ಎಂದು ಆತನ ಕುಟುಂಬವು ಆರೋಪಿಸಿದ್ದು,ಎನ್ಐಎ ಶನಿವಾರ ಈ ಬಗ್ಗೆ ವಿಚಾರಣೆಗೆ ಆದೇಶಿಸಿದೆ. ಆರೋಪಿ ಅಧಿಕಾರಿಯನ್ನು ಅಮಾನತುಗೊಳಿಸಿ ವರ್ಗಾವಣೆಗೊಳಿಸಲಾಗಿದೆ.

ಮಾದಕ ದ್ರವ್ಯ-ಭಯೋತ್ಪಾದನೆ ಪ್ರಕರಣವೊಂದಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಶುಕ್ರವಾರ ಯುಗರಾಜ್ ಸಿಂಗ್(31)ನನ್ನು ಎನ್ಐಎ ಕರೆಸಿಕೊಂಡಿತ್ತು. ಕಸ್ಟಡಿಯಲ್ಲಿರುವಾಗ ಎನ್ಐಎ ಅಧಿಕಾರಿಯೋರ್ವರು ಆತನನ್ನು ಥಳಿಸಿ ಹಿಂಸಿಸಿದ್ದಾರೆ ಎಂದು ಕುಟುಂಬವು ಆರೋಪಿಸಿದೆ. ತೀವ್ರವಾಗಿ ಗಾಯಗೊಂಡಿರುವ ಸಿಂಗ್ ನನ್ನು ಸರಕಾರಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.

ಸಿಖ್ ಧರ್ಮದ ಸಂಪ್ರದಾಯದಂತೆ ತನ್ನ ಸೋದರಳಿಯ ಕೃಪಾಣ (ಕಿರು ಖಡ್ಗ)ವನ್ನು ಧರಿಸಿದ್ದಕ್ಕಾಗಿ ಎನ್ಐಎ ಅಧಿಕಾರಿಗಳು ಆತನ ಮೇಲೆ ಹಲ್ಲೆ ನಡೆಸಿದ್ದಾರೆ, ಆತನ ತಾಯಿಯನ್ನು ನಿಂದಿಸಿದ್ದಾರೆ. ಆತ ಸಂಪ್ರದಾಯದಂತೆ ಉದ್ದ ಗಡ್ಡ ಬಿಟ್ಟಿದ್ದನ್ನೂ ಅವರು ಪ್ರಶ್ನಿಸಿದ್ದಾರೆ. ಇದರಲ್ಲಿ ಆತನ ಅಪರಾಧವೇನಿತ್ತು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್ ಸೋದರಮಾವ,ನಿವೃತ್ತ ಪೊಲೀಸ್ ಅಧಿಕಾರಿ ಸೇವಕ ಸಿಂಗ್ ಪ್ರಶ್ನಿಸಿದರು.

ಈ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳುತ್ತಿಲ್ಲ ಎಂದು ಅವರು ದೂರಿದರು.

ತೀವ್ರ ಗಾಯಗಳಾಗಿರುವ ಸಿಂಗ್ ಆಸ್ಪತ್ರೆಗೆ ದಾಖಲಾಗಿರುವ ವೀಡಿಯೊವೊಂದನ್ನು ಕುಟುಂಬವು ಬಿಡುಗಡೆಗೊಳಿಸಿದೆ. ಆತನ ತಂದೆ ಕಳೆದ ನಾಲ್ಕು ವರ್ಷಗಳಿಂದ ಪಾರ್ಶ್ವವಾಯು ಪೀಡಿತರಾಗಿದ್ದಾರೆ. ಆತನೊಬ್ಬನೇ ಕುಟುಂಬದ ಆಧಾರಸ್ತಂಭವಾಗಿದ್ದಾನೆ. ಆತನನ್ನು ಏಕೆ ವಿಚಾರಣೆಗೆ ಕರೆಸಲಾಗಿತ್ತು ಎನ್ನುವುದು ನಮಗೆ ಗೊತ್ತಿಲ್ಲ. ಆತ ಯಾವುದಾದರೂ ಅಪರಾಧದಲ್ಲಿ ಭಾಗಿಯಾಗಿದ್ದರೆ ಚಿತ್ರಹಿಂಸೆ ನೀಡಿದ ಬಳಿಕ ಬಿಡುಗಡೆಗೊಳಿಸಿದ್ದು ಏಕೆ ಎಂದೂ ಸೇವಕ ಸಿಂಗ್ ಪ್ರಶ್ನಿಸಿದರು. ಸಿಂಗ್ ಕುಟುಂಬದ ಆರೋಪವು ನಿಜವೆಂದು ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎನ್ಐಎ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News