ಕಾಪು : ರಕ್ತದಾನ, ರಕ್ತದೊತ್ತಡ ಮತ್ತು ಮಧುಮೇಹ ತಪಾಸಣಾ ಶಿಬಿರ

Update: 2021-03-28 17:04 GMT

ಕಾಪು : ರಕ್ತಕ್ಕೆ ಪರ್ಯಾಯವಾದುದು ಬೇರೊಂದಿಲ್ಲ. ಯುವಜನತೆ ಸ್ವಯಂ ಪ್ರೇರಿತಾಗಿ ರಕ್ತದಾನ ಮಾಡಲು ಬರುವ ಮೂಲಕ ಜನ ಸಾಮಾನ್ಯರ ಅಗತ್ಯದ ಸಂದರ್ಭದಲ್ಲಿ ರಕ್ತ ನಿಧಿ ಕೇಂದ್ರದ ಮೂಲಕವಾಗಿ ಒತ್ತಡ ರಹಿತವಾಗಿ ರಕ್ತ ಪೂರೈಸಲು ಸಹಕಾರಿಯಾಗುತ್ತದೆ ಎಂದು ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ. ವೀಣಾ ಕುಮಾರಿ ಹೇಳಿದರು. 

ಕಾಪು ಶ್ರೀ ವೀರಭದ್ರ ಸಭಾಭವನದಲ್ಲಿ ಭಾನುವಾರ ಜೇಸಿಐ ಕಾಪು ಘಟಕದ ನೇತೃತ್ವದಲ್ಲಿ ರಕ್ತ ನಿಧಿ ಕೇಂದ್ರ ಉಡುಪಿ ಜಿಲ್ಲಾಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಪ್ರಾಥಮಿಕ ಆರೋಗ್ಯ ಕೇಂದ್ರ ಕಾಪು, ಗೂಡ್ಸ್ ಟೆಂಪೋ ಮಾಲಕರ ಮತ್ತು ಚಾಲಕರ ಸಂಘ ಕಾಪು, ಯುವವಾಹಿನಿ ಕಾಪು ಘಟಕ, ಸತ್ಯದ ತುಳುವೆರ್ ಉಡುಪಿ - ಮಂಗಳೂರು ಮತ್ತು ಹಿಯಾ ಮೆಡಿಕಲ್ಸ್ ಕಾಪು ಇವರ ಸಹಯೋಗದಲ್ಲಿ 
ನಡೆದ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.  

ಕಾಪು ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್ ಶಿಬಿರವನ್ನು ಉದ್ಘಾಟಿಸಿದರು. ಉಡುಪಿ ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ಕಾಪು ಪೊಲೀಸ್ ಠಾಣಾ ಎಎಸ್‍ಐ ರಾಜೇಂದ್ರ ಮಣಿಯಾಣಿ, ಜೇಸಿಐ ವಲಯಾಧಿಕಾರಿ ಹರೀಶ್ ಕುಲಾಲ್, ಕಾಪು ಗೂಡ್ಸ್ ಟೆಂಪೋ ಮಾಲಕರ ಮತ್ತು ಚಾಲಕರ ಸಂಘದ ಗೌರವಾಧ್ಯಕ್ಷ ವಿನಯ ಬಲ್ಲಾಳ್ ಮುಖ್ಯ ಅತಿಥಿಗಳಾಗಿದ್ದರು.

49 ಭಾರಿ ರಕ್ತದಾನ ಮಾಡಿರುವ ಸತ್ಯದ ತುಳುವೆರ್ ಸಂಘಟನೆಯ ಸಂಚಾಲಕ ಪ್ರವೀಣ್ ಕುರ್ಕಾಲು ಅವರನ್ನು ಸಮ್ಮಾನಿಸಲಾಯಿತು. ಯುವವಾಹಿನಿ ಕಾಪು ಘಟಕದ ಅಧ್ಯಕ್ಷ ಸೌಮ್ಯ ರಾಕೇಶ್, ಗೂಡ್ಸ್ ಟೆಂಪೋ ಮಾಲಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಶೇಖ್ ನಝೀರ್, ಸತ್ಯದ ತುಳುವೆರ್ ಸಂಘಟನೆಯ ಅಧ್ಯಕ್ಷ ಪ್ರವೀಣ್ ಬಂಗೇರ, ಹೀಯಾ ಮೆಡಿಕಲ್ಸ್‍ನ ಮಾಲಕ ಯೋಗೀಶ್ ರೈ, ಕಾಪು ಜೇಸಿಐ ಜೆಸಿರೆಟ್ ಅಧ್ಯಕ್ಷೆ ಗಾಯತ್ರಿ ಜಿ. ಆಚಾರ್ಯ, ಯುವ ಜೇಸಿ ಅಧ್ಯಕ್ಷೆ ಪ್ರತೀಕ್ಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಕಾಪು ಜೇಸಿಐನ ಅಧ್ಯಕ್ಷೆ ಅರುಣಾ ಐತಾಳ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ದೀಕ್ಷಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News