ಪಡುಬಿದ್ರಿ: ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ವಿರೋಧ
ಪಡುಬಿದ್ರಿ: ನಡ್ಸಾಲ್ ಗ್ರಾಮದ ಅಬ್ಬೇಡಿಯ ಸುಜ್ಲೋನ್ ಆರ್.ಆರ್ ಕಾಲನಿ ಬಳಿ ಪಡುಬಿದ್ರಿ ಗ್ರಾಮ ಪಂಚಾಯಿತಿ ನಿರ್ಮಿಸಲು ಉದ್ದೇಶಿಸಿರುವ ಘನ ಮತ್ತು ದ್ರವ್ಯ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣದ ಪ್ರಸ್ತಾಪಕ್ಕೆ ಸ್ಥಳೀಯ ನಿವಾಸಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರವಿವಾರ ಸುಜ್ಲೋನ್ ಕಾಲೊನಿ ಸಭಾಂಗಣದಲ್ಲಿ ಸ್ಥಳೀಯ ನಿವಾಸಿಗಳು ಸಭೆ ನಡೆಸಿದ್ದು. ಯಾವುದೇ ಕಾರಣಕ್ಕೂ ತ್ಯಾಜ್ಯ ನಿರ್ವಹಣ ಘಟಕ ಇಲ್ಲಿ ನಿರ್ಮಿಸಬಾರದು ಎಂದು ನಿರ್ಣಯ ಕೈಗೊಂಡಿದ್ದಾರೆ.
ಪಡುಬಿದ್ರಿ ಗ್ರಾಮ ಪಂಚಾಯಿತ್ ಸರಕಾರಿ ಜಮೀನಿನ ಪೈಕಿ 0.19.ಎಕ್ರೆ ಸರ್ಕಾರಿ ಜಮೀನ ಎನ್‍ಟಿಪಿಸಿ ಜಾಗದ ಬಳಿ ತ್ಯಾಜ್ಯ ನಿರ್ವಹಣ ಘಟಕ ನಿರ್ಮಿಸಲು ಮುಂದಾಗಿದೆ. ಪ್ರಸ್ತಾವಿತ ಜಾಗದ ಪಕ್ಕದಲ್ಲಿ ಅಂಗನವಾಡಿ ಇದ್ದು, ಸುತ್ತ ಮುತ್ತ ಇರುವ ಸುಮಾರು 500 ಮನೆಗಳ ನಿವಾಸಿಗಳಿಗೆ ಆರೋಗ್ಯ ಸಮಸ್ಯೆ ಹಾಗೂ ವಾಯು ಮಾಲಿನ್ಯ ಇನ್ನಿತರ ಸಮಸ್ಯೆಗಳು ಉಂಟಾಗಲಿವೆ. ಈ ಆದೇಶವನ್ನ ತತಕ್ಷಣವೇ ಹಿಂಪಡೆದು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿರ್ಜನ ಪ್ರದೇಶದಲ್ಲಿ ಈ ಪ್ರಸ್ಥಾಪಿತ ತ್ಯಾಜ್ಯ ನಿರ್ವಹಣ ಘಟಕ ಸ್ಥಾಪಿಸ ಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಘನ ಮತ್ತು ದ್ರವ್ಯ ತ್ಯಾಜ್ಯ ನಿರ್ವಹಣ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಸಾರ್ವಜನಿಕ ನೋಟಿಸ್ ಪ್ರಚುರಪಡಿಸಲಾಗಿದ್ದು ಯಾವುದೇ ಆಕ್ಷೇಪಣೆ ಬಂದಿರುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಅವರ ನಡಾವಳಿಯಲ್ಲಿ ಉಲ್ಲೇಖಿಸಿರುವುದು ಅತ್ಯಂತ ಖಂಡನಾರ್ಹ. ಈ ವಿಷಯದಲ್ಲಿ ಸಾರ್ವಜನಿಕರಿಗೆ ಯಾವುದೇ ನೋಟಿಸ್ ಅಥವಾ ಮಾಹಿತಿ ನೀಡದೆ ಗ್ರಾಮಪಂಚಾಯತ್ ನಲ್ಲಿರುವ ಜನವಿರೋಧಿಗಳು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ಈ ಆತಂಕಕಾರಿ ಆದೇಶ ಹೊರಡಿಸಲು ಕಾರಣಕರ್ತರಾಗಿದ್ದಾರೆ ಎಂದು ಸಭೆಯಲ್ಲಿ ಪಂಚಾಯತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯತ್ ಸದಸ್ಯೆ ಸಂಜೀವಿ ಪೂಜಾರ್ತಿ ಅವರ ಅಧ್ಯಕ್ಷತೆ ವಹಿಸಿದ್ದರು. ಚಿಂತಕ ಲೋಲಾಕ್ಷ, ನಾರಾಯಣ ಶೆಟ್ಟಿ, ಭಾಸ್ಕರ್ ಪಡುಬಿದ್ರಿ, ಲೋಕೇಶ್ ಕಂಚಿನಡ್ಕ, ಮನೋಜ್ ಅಬ್ಬೇಡಿ, ಮೋಹನಾಂಗಯ್ಯ ಸ್ವಾಮಿ, ಮೊಹಿಯುದ್ದೀನ್ , ಉಮಾನಾಥ ಕೆ.ಆರ್ ಮತ್ತು ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.