ಬಾಂಗ್ಲಾ: ಮೋದಿ ಭೇಟಿಯ ವಿರುದ್ಧ ಮುಂದುವರಿದ ಹಿಂಸಾಚಾರ

Update: 2021-03-28 18:00 GMT

ಢಾಕಾ,ಮಾ.28: ಪ್ರಧಾನಿ ನರೇಂದ್ರ ಮೋದಿಯವರ ಬಾಂಗ್ಲಾ ಭೇಟಿಯನ್ನು ವಿರೋಧಿಸಿ ಬಾಂಗ್ಲಾದ ವಿವಿಧೆಡೆ ಭುಗಿಲೆದ್ದ ಹಿಂಸಾಚಾರ, ರವಿವಾರವೂ ಮುಂದುವರಿದಿದ್ದು ತೀವ್ರವಾದಿ ಸಂಘಟನೆಯ ಕಾರ್ಯಕರ್ತರ ಗುಂಪೊಂದು ದೇಗುಲಗಳು ಹಾಗೂ ರೈಲಿನ ಮೇಲೆ ದಾಳಿ ನಡೆಸಿವೆ.

ಮೋದಿ ಬಾಂಗ್ಲಾ ಭೇಟಿಯನ್ನು ವಿರೋಧಿಸಿ ಶುಕ್ರವಾರದಿಂದೀಚೆಗೆ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪೊಲೀಸ್ ಗೋಲಿಬಾರಿಗೆ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ. ಮೋದಿ ಭೇಟಿಯ ವಿರುದ್ಧ ಪ್ರತಿಭಟನೆ ನಡೆಸುವಂತೆ ಬಾಂಗ್ಲಾದ ಕೆಲವು ಧಾರ್ಮಿಕ ಗುಂಪುಗಳು ಕರೆ ನೀಡಿದ್ದವು.

  ಬಾಂಗ್ಲಾ ಸ್ವಾತಂತ್ರ್ಯದ 50ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಶುಕ್ರವಾರ ಢಾಕಾಗೆ ಭೇಟಿ ನೀಡಿದ್ದರು. 12 ಲಕ್ಷ ಕೋವಿಡ್-19 ಲಸಿಕೆಗಳನ್ನು ಬಾಂಗ್ಲಾಗೆ ಕೊಡುಗೆಯಾಗಿ ನೀಡಿದ್ದ ಮೋದಿ, ಶನಿವಾರ ಸ್ವದೇಶಕ್ಕೆ ವಾಪಸಾಗಿದ್ದರು.

ಭಾರತದಲ್ಲಿ ಮುಸ್ಲಿಮರ ವಿರುದ್ಧ ಪ್ರಧಾನಿ ಮೋದಿ ತಾರತಮ್ಯದ ನೀತಿಗಳನ್ನು ಅನುಸರಿಸುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದ್ದರು.

 ಢಾಕಾ ಸೇರಿದಂತೆ ಬಾಂಗ್ಲಾದ ವಿವಿಧ ನಗರಗಳಲ್ಲಿ ರವಿವಾರ ನೂರಾರು ಮಂದಿ ಪ್ರತಿಭಟನಾಕಾರರು ಜಾಥಾ ನಡೆಸಿದರು. ಈ ಮಧ್ಯೆ ಪೂರ್ವ ಬಾಂಗ್ಲಾದ ಬ್ರಹ್ಮನ್‌ಬಾರಿಯಾ ಜಿಲ್ಲೆಯಲ್ಲಿ ಹಿಫಾಝತೆ ಇಸ್ಲಾಂ ಎಂಬ ಸಂಘಟನೆಯ ಕಾರ್ಯಕರ್ತರೆನ್ನಲಾದವರ ಗುಂಪೊಂದು ರೈಲಿನ ಮೇಲೆ ದಾಳಿ ನಡೆಸಿದ್ದು, ಘಟನೆಯಲ್ಲಿ 10 ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

 ಹಲವಾರು ಸರಕಾರಿ ಕಚೇರಿಗಳು, ಸರಕಾರಿ ಪ್ರಾಯೋಜಿತ ಸಂಗೀತ ಶಿಕ್ಷಣ ಸಂಸ್ಥೆಗಳಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದಾರೆ ಮತ್ತು ಹಲವಾರು ಹಿಂದೂ ದೇಗುಲಗಳ ಮೇಲೂ ದಾಳಿ ನಡೆದಿರುವುದಾಗಿ ಬ್ರಹ್ಮನ್‌ಬಾರಿಯಾ ಪಟ್ಟಣದ ಪತ್ರಕರ್ತ ಜಾವೇದ್ ರಹೀಮ್ ತಿಳಿಸಿದ್ದಾರೆ.

ಬ್ರಹ್ಮನ್‌ಬಾರಿಯಾದಲ್ಲಿ ಶನಿವಾರದ ಹಿಂಸಾಚಾರದಲ್ಲಿ ಗಂಭೀರ ಗಾಯಗೊಂಡಿದ್ದ ಓರ್ವ ಪ್ರತಿಭಟನಕಾರ ರವಿವಾರ ಸಾವನ್ನಪ್ಪಿರುವುದಾಗಿ ವೈದ್ಯರೊಬ್ಬರು ತಿಳಿಸಿದ್ದಾರೆ.ರವಿವಾರ ರಾಜಾಶಾಹಿ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ಎರಡು ಬಸ್‌ಗಳಿಗೆ ಬೆಂಕಿ ಹಚ್ಚಿದ್ದಾರೆ ಹಾಗೂ ಹಲವೆಡೆ ನೂರಾರು ಪ್ರತಿಭಟನಕಾರರು ಪೊಲೀಸರೊಂದಿಗೆ ಘರ್ಷಣೆಗಿಳಿದರೆಂದು ಪೊಲೀಸ್ ಮೂಲಗಳು ತಿಳಿಸಿವೆ.

   ಮೋದಿ ಭೇಟಿಯ ವಿರುದ್ಧ ಶನಿವಾರ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಗುಂಡು ಹಾರಿಸಿದ್ದನ್ನು ಪ್ರತಿಭಟಿಸಿ ರವಿವಾರ ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News