ವೇಣೂರು-ಆರಂಬೋಡಿ: ಗ್ರಾ. ಪಂ ಚುನಾವಣೆ; ವೇಣೂರು 75,ಆರಂಬೋಡಿ 76 ಶೇ. ಮತದಾನ
ಬೆಳ್ತಂಗಡಿ : ವೇಣೂರು ಹಾಗೂ ಆರಂಬೋಡಿ ಗ್ರಾಮ ಪಂಚಾಯತುಗಳಿಗೆ ನಡೆದ ಚುನಾವಣೆ ಅತ್ಯಂತ ಶಾಂತಿಯುತವಾಗಿ ನಡೆದಿದ್ದು ಮತದಾರು ಉತ್ಸಾಹದಿಂದ ಚುನಾವಣೆಯಲ್ಲಿ ಭಾಗವಹಿಸಿದ್ದರು. ವೇಣೂರಿನಲ್ಲಿ ಶೆ 75 ಮತದಾನವಾದರೆ ಆರಂಬೋಡಿ ಯಲ್ಲಿ ಶೇ 76ರಷ್ಟು ಮತದಾನವಾಗಿದೆ.
ವೇಣೂರು ಗ್ರಾಮ ಪಂಚಾಯತಿನ 24 ಸ್ಥಾನಗಳಿಗೆ 51 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರೆ, ಆರಂಬೋಡಿ ಗ್ರಾ.ಪಂ. 12 ಸ್ಥಾನಗಳಿಗೆ 24 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು.
ಮತಗಟ್ಟೆಗಳಲ್ಲಿ ಬೆಳಗ್ಗೆ 7 ರಿಂದ ಮತದಾನ ಆರಂಭಗೊಂಡು ಸಂಜೆ 5ರ ವರೆಗೆ ಮತದಾನ ನಡೆಯಿತು. ಎರಡೂ ಗ್ರಾಮ ಪಂಚಾಯತುಗಳಲ್ಲಿ ಜನರು ಬೆಳಗ್ಗೆ ಹಾಗೂ ಸಂಜೆಯ ವೇಳೆ ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದರು.
ಎರಡೂ ಗ್ರಾ.ಪಂ.ನ ಮತದಾನದ ಕೇಂದ್ರದ ಸುತ್ತಮುತ್ತ ವಿವಿಧ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಮತದಾನಕ್ಕೆ ಬರುವ ಮತದಾರರನ್ನು ತಮ್ಮತ್ತ ಸೆಳೆದು ತಮ್ಮ ಪರ ಅಭ್ಯರ್ಥಿಗೆ ಮತ ಚಲಾಯಿಸುವಂತೆ ವಿನಂತಿಸುತ್ತಿರುವುದು ಕಂಡು ಬಂದಿತ್ತು.
ತಾಲೂಕು ನಾಯಕರ ಭೇಟಿ
ವೇಣೂರು ಹಾಗೂ ಆರಂಬೋಡಿ ಗ್ರಾ.ಪಂ. ಚುನಾವಣೆಯ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಶಾಸಕ ಹರೀಶ್ ಪೂಂಜ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಮೋಹನ ಅಂಡಿಂಜೆ, ಉದಯ ಹೆಗ್ಡೆ ನಾರಾವಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮತಕಟ್ಟೆಗಳಿಗೆ ಮಾಜಿ ಶಾಸಕ ಕೆ. ವಸಂತ ಬಂಗೇರ, ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್, ಯುವಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ ಆಗಮಿಸಿ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತ ರನ್ನು ಹುರಿದುಂಬಿಸಿದರು.
ಮಾ. 31ದು ಮತ ಎಣಿಕೆ
ಬೆಳ್ತಂಗಡಿ ಎಪಿಎಂಸಿ ಸಭಾಂಗಣದಲ್ಲಿ ಮಾ. 31ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.