×
Ad

ಪಡುಬಿದ್ರಿ: ಘನತ್ಯಾಜ್ಯ ಘಟಕಕ್ಕೆ ವಿರೋಧ; ಪ್ರತಿಭಟನೆ

Update: 2021-03-29 22:34 IST

ಪಡುಬಿದ್ರಿ: ಪಡುಬಿದ್ರಿ ಗ್ರಾಮ ಪಂಚಾಯಿತಿ ಸುಜ್ಲಾನ್ ಆರ್‍ಆರ್ ಕಾಲೊನಿಯ ಎನ್‍ಟಿಪಿಸಿ ಗೋಡೋನ್ ಬಳಿ ನಿರ್ಮಿಸಲು ಉದ್ದೇಶಿಸಿರುವ  ಘನ ಮತ್ತು ದ್ರವ್ಯ ತ್ಯಾಜ್ಯ ನಿರ್ವಹಣಾ ಘಟಕ ಕಾಮಗಾರಿಯನ್ನು ಸ್ಥಳೀಯರ ಪ್ರತಿಭಟನೆಗೆ ಮಣಿದು ತಾತ್ಕಾಲಿಕವಾಗಿ ಕೈಬಿಟ್ಟಿತು.

ಪಡುಬಿದ್ರಿ ನಡ್ಸಾಲ್ ಗ್ರಾಮದ ಅಬ್ಬೇಡಿ ಮತ್ತು ಸುಜ್ಲಾನ್ ಕಾಲನಿ ಬಳಿಯ ಸರ್ವೆ ನಂಬ್ರ 77/37ರಲ್ಲಿ ಗೊತ್ತುಪಡಿಸಿದ್ದ 19 ಸೆಂಟ್ಸ್ ಸರ್ಕಾರಿ ಜಮೀನಲ್ಲಿ ಪಡುಬಿದ್ರಿ ಗ್ರಾಮ ಪಂಚಾಯಿತಿ ಘನ ಮತ್ತು ದ್ರವ್ಯ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಕಾಮಗಾರಿಗೆ  ಜಿಲ್ಲಾಧಿಕಾರಿ ಆದೇಶ ನೀಡಿತ್ತು. ಇದರಂತೆ ಪಡುಬಿದ್ರಿ ಗ್ರಾಮ ಪಂಚಾಯಿತಿನಿಂದ ಸೋಮವಾರ ಸ್ಥಳ ಪರಿಶೀಲನೆ ಮತ್ತು ಕಾಮಗಾರಿಗೆ ಸಿದ್ದತೆ ನಡೆಸಿತ್ತು. ಇಲ್ಲಿಗೆ ಅಧಿಕಾರಿಗಳು ಬರುವ ವಿಷಯ ತಿಳಿದು ಸ್ಥಳೀಯ ನಿವಾಸಿಗಳು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆಗೆ ಮುಂದಾಗಿದ್ದರು.

ಸ್ಥಳೀಯರು ಜಮಾವಣೆಗೊಂಡಿರುವುದನ್ನು ಅರಿತು ಸ್ಥಳ ಪರಿಶೀಲನೆ ನಡೆಸುವುದು ಮತ್ತು ಕಾಮಗಾರಿ ಸಿದ್ಧತೆ ನಡೆಸುವುದನ್ನು ಗ್ರಾಮ ಪಂಚಾಯಿತಿ ಕೈಬಿಟ್ಟಿತು. ಅದನ್ನರಿತ ಪಂಚಾಯಿತಿ ಕಾಮಗಾರಿ ಸ್ಥಳಕ್ಕೆ ಆಗಮಿಸದೇ ಗ್ರಾಮಸ್ಥರನ್ನೇ ಪಂಚಾಯಿತಿಗೆ ಆಹ್ವಾನಿಸಿ ಮಾತುಕತೆಗೆ ಮುಂದಾಯಿತು. ಪಂಚಾಯಿತಿ ಮುಂಭಾಗಕ್ಕೆ ಬಂದ ಸ್ಥಳೀಯ ಪ್ರತಿಭಟನಾಕಾರರ ಪಂಚಾಯಿತಿ ಹಾಗೂ ಜಿಲ್ಲಾಡಳಿತದ ನಿರ್ಧಾರವನ್ನು ವಿರೋಧಿಸಿದರು. 

ಘಟಕ ನಿರ್ಮಾಣದಿಂದ ಆರೋಗ್ಯ ಸಮಸ್ಯೆ ಹಾಗೂ ವಾಯು ಮಾಲಿನ್ಯ ಇನ್ನಿತರ ಸಮಸ್ಯೆಗಳು ಉಂಟಾಗಲಿವೆ. ಆದ್ದರಿಂದ ಯಾವುದೇ ಕಾರಣಕ್ಕೂ ತ್ಯಾಜ್ಯ ನಿರ್ವಹಣ ಘಟಕ ನಿರ್ಮಿಸಬಾರದು. ಈ ಆದೇಶವನ್ನ ತಕ್ಷಣವೇ ಹಿಂಪಡೆದು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಿರ್ಜನ ಪ್ರದೇಶದಲ್ಲಿ ಈ ಪ್ರಸ್ಥಾಪಿತ ತ್ಯಾಜ್ಯ ನಿರ್ವಹಣ ಘಟಕ ಸ್ಥಾಪಿಸಬೇಕೆಂದು ಪಟ್ಟುಹಿಡಿದರು.

ಪಡುಬಿದ್ರಿ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಮುಂದಾದರೂ ಗ್ರಾಮಸ್ಥರು ಅದಕ್ಕೆ ಒಪ್ಪಲಿಲ್ಲ.  ಸಾರ್ವಜನಿಕರ ವಿರೋಧ ತೀವ್ರಗೊಳ್ಳುತಿದ್ದಂತೆ ಪಂಚಾಯಿತಿ  ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವವರೆಗೆ ಘಟಕ ನಿರ್ಮಾಣವನ್ನು ತಾತ್ಕಾಲಿಕವಾಗಿ ಕೈಬಿಡುವುದಾಗಿ ತಿಳಿಸಿತು. ಅದರಂತೆ ಹಿಂಬರಹವನ್ನು ಪಿಡಿಒ ಪಂಚಾಕ್ಷರೀ ಸ್ವಾಮಿ ಕೆರಿಮಠ ಪ್ರತಿಭಟನಾಕಾರರಿಗೆ ನೀಡಿದರು. ಪಂಚಾಯಿತಿ ನಿರ್ಧಾರಕ್ಕೆ ಬದ್ಧರಾಗಿ ಗ್ರಾಮಸ್ಥರು ಪ್ರತಿಭಟನೆಯಿಂದ ಹಿಂದೆ ಸರಿದರು.

ದಲಿತ ಮುಖಂಡ ಲೋಕೇಶ್ ಕಂಚಿನಡ್ಕ, ಗ್ರಾಮ ಪಂಚಾಯತ್ ಸದರಾದ ಸಂಜೀವಿ ಪೂಜಾರ್ತಿ, ನವೀನ್ ಎನ್.ಶೆಟ್ಟಿ, ನಿಯಾಝ್, ಎಂ.ಎಸ್. ಶಫಿ, ಜ್ಯೂತಿ ಮೆನನ್,  ನಾರಾಯಣ ಶೆಟ್ಟಿ, ಸದಾಶಿವ್ ಪಡುಬಿದ್ರಿ, ಭಾಸ್ಕರ್ ಪಡುಬಿದ್ರಿ, ನಿಝಾಮುದ್ದೀನ್,  ಮನೋಜ್ ಅಬ್ಬೇಡಿ, ಮೊಹಿಯುದ್ದೀನ್, ಉಮಾನಾಥ ಕೆ.ಆರ್ ಮತ್ತು ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News