ಕಲಿತ ಶಾಲೆ, ಕಲಿಸಿದ ಶಿಕ್ಷಕರನ್ನು ಮರೆಯದಿರಿ : ಶಶಿಧರ್ ಜಿ.ಎಸ್.
ಕಾರ್ಕಳ : ತಾವು ಓದಿದ ಶಾಲೆ, ಕಲಿಸಿದ ಶಿಕ್ಷಕರನ್ನು ಎಂದಿಗೂ ಮರೆಯಬಾರದು. ಸಮಯ ಸಿಕ್ಕಾಗ ತಾವು ಕಲಿತ ಶಾಲೆಗೆ ಭೇಟಿ ನೀಡಬೇಕು. ತಮ್ಮ ಶಿಕ್ಷಕರನ್ನು ಮಾತನಾಡಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ಮಾ. 28ರಂದು ಕೆಎಂಇಎಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆಎಂಇಎಸ್ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣದೊಂದಿಗೆ ಶೇ. 90 ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದು ಅಭಿನಂದನೀಯವೆಂದರು.
ಕಾರ್ಕಳ ನಗರ ಪೊಲೀಸ್ ಠಾಣೆ ಎಸ್‌ಐ ಮಧು ಬಿ.ಇ., ಮಾತನಾಡಿ, ಅಂಕ ಗಳಿಸುವುದೇ ಶಿಕ್ಷಣ ಸಂಸ್ಥೆಗಳ ಗುರಿಯಾಗದೇ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ, ನೈತಿಕ ಶಿಕ್ಷಣ ಒದಗಿಸಬೇಕೆಂದರು.
2019-20 ಶೈಕ್ಷಣಿಕ ಸಾಲಿನಲ್ಲಿ ಅತ್ಯಧಿಕ ಅಂಕ ಗಳಿಸಿದ ಎಸ್‌ಎಸ್‌ಎಲ್‌ಸಿಯ 16 ಹಾಗೂ ಪಿಯುಸಿಯ 41 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಇಮ್ತಿಯಾಝ್ ಅಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.
ಪ್ರಾಂಶುಪಾಲರಾದ ರಾಮಚಂದ್ರ ನೆಲ್ಲಿಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಾದ ಸಾಕ್ಷತ್ ಶೆಟ್ಟಿ, ಪ್ರತೀಕ್ಷಾ, ಶಭಿನಾಝ್ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಹೆತ್ತವರ ಪರವಾಗಿ ಹರೀಶ್ ಶೆಟ್ಟಿ ಮಾತನಾಡಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಲೋಲಿಟಾ ಡಿ’ಸಿಲ್ವಾ ಸ್ವಾಗತಿಸಿ, ಶ್ರೀಮತಿ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು. ನಳಿನಿ ಆಚಾರ್ಯ ವಂದಿಸಿದರು.