ಸೂಯೆಝ್ ಕಾಲುವೆ ದಾಟಿದ 253 ಹಡಗುಗಳು
ಕೈರೋ (ಈಜಿಪ್ಟ್), ಮಾ. 30: ಈಜಿಪ್ಟ್‌ನ ಸೂಯೆಝ್ ಕಾಲುವೆಯಲ್ಲಿ 6 ದಿನಗಳ ಕಾಲ ಸಿಕ್ಕಿಹಾಕಿಕೊಂಡಿದ್ದ ಸರಕು ಹಡಗು ಸೋಮವಾರ ತೇಲಿದ ಬಳಿಕ, ಅದೇ ರಾತ್ರಿ ಕಾಲುವೆಯ ಇಕ್ಕೆಲಗಳಲ್ಲಿ ಬಾಕಿಯಾಗಿದ್ದ 113 ಹಡಗುಗಳು ಕಾಲುವೆಯನ್ನು ದಾಟಿವೆ ಎಂದು ಸೂಯೆಜ್ ಕಾಲುವೆ ಪ್ರಾಧಿಕಾರ ಅಧ್ಯಕ್ಷ ಉಸಾಮ ರಾಬಿಈ ಮಂಗಳವಾರ ಹೇಳಿದ್ದಾರೆ.
ಮಂಗಳವಾರ ಇನ್ನೂ 140 ಹಡಗುಗಳು ಕಾಲುವೆಯನ್ನು ದಾಟಲಿವೆ ಎಂದು ಅವರು ತಿಳಿಸಿದ್ದಾರೆ.
ಸ್ಥಳೀಯ ಸಮಯ ಸಂಜೆ 7 ಗಂಟೆ ವೇಳೆಗೆ 95 ಹಡಗುಗಳು ಕಾಲುವೆಯನ್ನು ದಾಟುತ್ತವೆ ಹಾಗೂ ಮಧ್ಯರಾತ್ರಿ ವೇಳೆಗೆ ಇನ್ನೂ 45 ಹಡಗುಗಳು ದಾಟಲಿವೆ ಎಂದು ರಾಬಿಈ ನುಡಿದರು.
ಕಾಲುವೆಯಲ್ಲಿ ತಡೆ ಏರ್ಪಟ್ಟ ಹಿನ್ನೆಲೆಯಲ್ಲಿ ಬಾಕಿಯಾಗಿರುವ ಎಲ್ಲ ಹಡಗುಗಳು ಇನ್ನು 3-4 ದಿನಗಳಲ್ಲಿ ತೆರವುಗೊಳ್ಳುತ್ತವೆ ಎಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದರು.
‘ಎವರ್ ಗಿವನ್’ ಕಾಲುವೆಯಲ್ಲಿ ಸಿಕ್ಕಿ ಹಾಕಿಕೊಳ್ಳಲು ಏನು ಕಾರಣವೇನು?: ತನಿಖೆ ಆರಂಭ
ಬೃಹತ್ ಕಂಟೇನರ್ ಹಡಗು ‘ಎವರ್ ಗಿವನ್’ ಸೂಯೆಝ್ ಕಾಲುವೆಯಲ್ಲಿ ಅಡ್ಡಕ್ಕೆ ಸಿಲುಕಿಕಕೊಳ್ಳಲು ಕಾರಣವಾದ ಅಂಶಗಳನ್ನು ಪತ್ತೆಹಚ್ಚಲು ಅಧಿಕಾರಿಗಳು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಮಾರ್ಚ್ 30ರಂದು ಕಾಲುವೆಯಲ್ಲಿ ಅಡ್ಡಕ್ಕೆ ಸಿಕ್ಕಿಹಾಕಿಕೊಂಡಿದ್ದ ಹಡಗನ್ನು ಬೃಹತ್ ಕಾರ್ಯಾಚರಣೆಯ ಬಳಿಕ ಸೋಮವಾರ ತೆರವುಗೊಳಿಸಲಾಗಿದೆ.
ಹಡಗನ್ನು ಮಂಗಳವಾರ ಸೂಯೆಝ್ ಕಾಲುವೆಯ ಉತ್ತರ ಮತ್ತು ದಕ್ಷಿಣದ ತುದಿಗಳ ನಡುವೆ ಇರುವ ಬೃಹತ್ ಜಲಪ್ರದೇಶ ಗ್ರೇಟ್ ಬಿಟರ್ ಲೇಕ್‌ನಲ್ಲಿ ಸುರಕ್ಷಿತವಾಗಿ ಲಂಗರು ಹಾಕಲಾಗಿದೆ.
ಹಡಗಿಗೆ ಆಗಿರಬಹುದಾದ ಹಾನಿಗಳು ಮತ್ತು ಅದು ನೆಲಕ್ಕೆ ತಾಗಿ ನಿಲ್ಲಲು ಕಾರಣವಾದ ಅಂಶಗಳ ಬಗ್ಗೆ ಪರಿಣತರು ತನಿಖೆ ನಡೆಸಲಿದ್ದಾರೆ ಎಂದು ಹಿರಿಯ ಕ್ಯಾನಲ್ ಪೈಲಟ್ ಒಬ್ಬರು ‘ಅಸೋಸಿಯೇಟಡ್ ಪ್ರೆಸ್’ ಸುದ್ದಿ ಸಂಸ್ಥೆಗೆ ಹೇಳಿದರು.
ಜಪಾನ್ ಕಂಪೆನಿಯೊಂದರ ಒಡೆತನದ ಹಡಗಿನ ಇಂಜಿನ್‌ಗಳನ್ನು ಇಂಜಿನಿಯರ್‌ಗಳು ಪರಿಶೀಲಿಸುತ್ತಿದ್ದಾರೆ. ಅದು ಏಶ್ಯದಿಂದ ನೆದರ್‌ಲ್ಯಾಂಡ್ಸ್‌ಗೆ ಸರಕು ಸಾಗಿಸುತ್ತಿದೆ.
ಭಾರತೀಯ ನಾವಿಕರ ವೃತ್ತಿಪರತೆಗೆ ಶ್ಲಾಘನೆ
ಮಾರ್ಚ್ 23ರಿಂದ ಸೋಮವಾರದವರೆಗೆ ಸೂಯೆಝ್ ಕಾಲುವೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ದೈತ್ಯ ಕಂಟೇನರ್ ಹಡಗಿನ 25 ಭಾರತೀಯ ನಾವಿಕರು, ಕೊನೆಯವರೆಗೂ ಹಡಗಿನಲ್ಲೇ ಇದ್ದು ತೆರವು ಕಾರ್ಯಾಚರಣೆಗೆ ಸಹಕಾರ ನೀಡಿದ್ದರು ಎಂದು ಹಡಗಿನ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಹಡಗನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಈ ಸಿಬ್ಬಂದಿ ಕೂಡ ಭಾಗಿಯಾಗಿದ್ದರು ಎಂದು ಜಪಾನ್ ಕಂಪೆನಿಯೊಂದರ ಮಾಲೀಕತ್ವದ ಹಡಗಿನ ತಾಂತ್ರಿಕ ನಿರ್ವಹಣೆಯ ಉಸ್ತುವಾರಿ ಹೊತ್ತಿರುವ ಜರ್ಮನಿಯ ಬೆರ್ನಾರ್ಡ್ ಶಲ್ಟ್ ಶಿಪ್‌ಮ್ಯಾನೇಜ್‌ಮೆಂಟ್ (ಬಿಎಸ್‌ಎಮ್) ಕಂಪೆನಿ ಮಾಧ್ಯಮ ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘25 ಭಾರತೀಯರನ್ನು ಒಳಗೊಂಡ ನಾವಿಕ ತಂಡವು ಹಡಗಿನಲ್ಲೇ ಇತ್ತು. ಅವರು ಸುರಕ್ಷಿತರಾಗಿದ್ದಾರೆ ಹಾಗೂ ಉತ್ತಮ ಆರೋಗ್ಯದಲ್ಲಿದ್ದಾರೆ. ಅವರು ಹಡಗನ್ನು ಮರುತೇಲಿಸುವ ಕಾರ್ಯಾಚರಣೆಯಲ್ಲಿ ಎಲ್ಲರೊಂದಿಗೆ ನಿಕಟವಾಗಿ ಬೆರೆತು ಕೆಲಸ ಮಾಡುತ್ತಿದ್ದರು. ಅವರ ಕಠಿಣ ಪರಿಶ್ರಮ ಮತ್ತು ವೃತ್ತಿಪರತೆ ಪ್ರಶಂಸನೀಯ’’ ಎಂದು ಕಂಪೆನಿ ಹೇಳಿದೆ.