ಮ್ಯಾನ್ಮಾರ್: ಕ್ಷಿಪ್ರಕ್ರಾಂತಿ ಬಳಿಕ 500 ದಾಟಿದ ನಾಗರಿಕರ ಸಾವು
ಯಾಂಗನ್ (ಮ್ಯಾನ್ಮಾರ್), ಮಾ. 30: ಫೆಬ್ರವರಿ ಒಂದರಂದು ನಡೆದ ಸೇನಾ ಕ್ಷಿಪ್ರಕ್ರಾಂತಿಯ ಬಳಿಕ ಮ್ಯಾನ್ಮಾರ್‌ನಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ನಾಗರಿಕರ ಸಂಖ್ಯೆ 500ನ್ನು ದಾಟಿದೆ.
ಅದೇ ವೇಳೆ, ಜನರ ಮೇಲೆ ಭದ್ರತಾ ಪಡೆಗಳು ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿರುವ ಮೂರು ಬಂಡುಕೋರ ಗುಂಪುಗಳು, ಸೇನೆಯು ರಕ್ತಪಾತವನ್ನು ನಿಲ್ಲಿಸದಿದ್ದರೆ ನಾಗರಿಕರ ಪರವಾಗಿ ಪ್ರತಿ ಹೋರಾಟ ನಡೆಸಲಾಗುವುದು ಎಂಬುದಾಗಿ ಎಚ್ಚರಿಸಿವೆ.
ಜನರ ಪ್ರತಿಭಟನೆಗಳ ಮೇಲೆ ಸೈನಿಕರು ಈಗ ರಬ್ಬರ್ ಗುಂಡು ಮತ್ತು ನೈಜ ಗುಂಡುಗಳನ್ನು ಹಾರಿಸುತ್ತಿದ್ದಾರೆ.
ಸೈನಿಕರ ದಾಳಿಯಲ್ಲಿ ಈವರೆಗೆ 510 ನಾಗರಿಕರು ಮೃತಪಟ್ಟಿರುವುದು ಖಚಿತಪಟ್ಟಿದೆ ಎಂದು ರಾಜಕೀಯ ಕೈದಿಗಳ ಸಂಘಟನೆ (ಎಎಪಿಪಿ) ತಿಳಿಸಿದೆ. ಆದರೆ, ವಾಸ್ತವವಾಗಿ ಈ ಸಂಖ್ಯೆ ತುಂಬಾ ಹೆಚ್ಚಿರಬಹುದು ಎಂಬುದಾಗಿ ಎಚ್ಚರಿಸಿದೆ.
ಮಂಗಳವಾರ ಮೂಸೆ ಪಟ್ಟಣದಲ್ಲಿ ನಡೆದ ಪ್ರತಿಭಟನೆಯ ಮೇಲೆ ಸೈನಿಕರು ಗುಂಡು ಹಾರಿಸಿದಾಗ 35 ವರ್ಷದ ಪ್ರತಿಭಟನಕಾರರೊಬ್ಬರು ಪ್ರಾಣ ಕಳೆದುಕೊಂಡರು.
ವ್ಯಾಪಾರ ಒಪ್ಪಂದ ಸ್ಥಗಿತಗೊಳಿಸಿದ ಅಮೆರಿಕ
ವಾಶಿಂಗ್ಟನ್: ಮ್ಯಾನ್ಮಾರ್‌ನಲ್ಲಿ ಸೇನಾಡಳಿತವನ್ನು ವಿರೋಧಿಸುತ್ತಿರುವ ನಿರಾಯುಧ ನಾಗರಿಕರ ಮೇಲೆ ದೇಶದ ಸೈನಿಕರು ನಡೆಸುತ್ತಿರುವ ಅಮಾನುಷ ದೌರ್ಜನ್ಯವನ್ನು ಖಂಡಿಸಿ ಆ ದೇಶದೊಂದಿಗಿನ ವ್ಯಾಪಾರ ಒಪ್ಪಂದವೊಂದನ್ನು ಅಮೆರಿಕ ಸ್ಥಗಿತಗೊಳಿಸಿದೆ.
ಉಭಯ ದೇಶಗಳ ನಡುವಿನ ವ್ಯಾಪಾರ ವೃದ್ಧಿಗೆ ಅವಕಾಶ ನೀಡುವ 2013ರ ವ್ಯಾಪಾರ ಮತ್ತು ಹೂಡಿಕೆ ಒಪ್ಪಂದವನ್ನು ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಮರಳುವವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ರ ಸರಕಾರ ಸೋಮವಾರ ಘೋಷಿಸಿದೆ.
‘‘ನಾಗರಿಕರ ವಿರುದ್ಧ ಬರ್ಮಾದ ಭದ್ರತಾ ಪಡೆಗಳು ನಡೆಸುತ್ತಿರುವ ಹಿಂಸೆಯನ್ನು ಅಮೆರಿಕ ಬಲವಾಗಿ ಖಂಡಿಸುತ್ತದೆ’’ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಕ್ಯಾತರೀನ್ ಟಾಯ್ ಹೇಳಿದ್ದಾರೆ.