ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳದ ಹಿನ್ನೆಲೆ: ಮಣಿಪಾಲ ಎಂಐಟಿ ಕ್ಯಾಂಪಸ್‌ಗೆ ಸಚಿವ ಸುಧಾಕರ್ ಭೇಟಿ
ಮಣಿಪಾಲ, ಮಾ.30: ಕಳೆದ ಹತ್ತು ದಿನಗಳಿಂದ ಕೊರೋನ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬಂದ ಮಣಿಪಾಲದ ಎಂಐಟಿ ಕ್ಯಾಂಪಸ್‌ಗೆ ಇಂದು ಭೇಟಿ ನೀಡಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಮಾಹೆ ಹಾಗೂ ಎಂಐಟಿ ಆಡಳಿತ ವರ್ಗದೊಂದಿಗೆ ಸಭೆ ನಡೆಸಿ, ಕೊರೋನ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆಗಳನ್ನು ನೀಡಿದರು.
ಕೊರೋನ ಎರಡನೇ ಅಲೆಯಿಂದ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಚಿವರು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಸಂಬಂಧಿತರೊಂದಿಗೆ ಚರ್ಚೆ ನಡೆಸಿದರು. ಈ ಹಿನ್ನೆಲೆಯಲ್ಲಿ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಗೆ ಭೇಟಿ ನೀಡಿದ ಸಚಿವರು ಎಂಐಟಿಯ ಆಡಳಿತ ಕಚೇರಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿ ಚರ್ಚಿಸಿದರು.
ಪ್ರಸ್ತುತ ಎಂಐಟಿ ಹಾಗೂ ಮಣಿಪಾಲದ ಆಸುಪಾಸು ಸೇರಿದಂತೆ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಕೋವಿಡ್- 19 ಸೋಂಕಿತರ ದಾಖಲಾತಿ ಅಧಿಕವಾಗಿದೆ. ಈ ಬಗ್ಗೆ ಮಾಹೆ ಕುಲಪತಿ ಹಾಗೂ ಎಂಐಟಿಯ ನಿರ್ದೇಶಕರು ಸೇರಿದಂತೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಮುಂದಿನ ದಿನಗಳಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿದರು.
ಸಚಿವರೊಂದಿಗೆ ಶಾಸಕ ಕೆ.ರಘುಪತಿ ಭಟಂ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ಮುಂಂತಾದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.