ಕೊರೋನ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ: ಸಚಿವ ಡಾ.ಸುಧಾಕರ್
ಮಣಿಪಾಲ, ಮಾ.30: ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಹೆಚ್ಚುತ್ತಿದೆ. ಎಂಐಟಿ ಒಂದೇ ಸಂಸ್ಥೆಯಲ್ಲಿ ಸಾವಿರಕ್ಕಿಂತಲೂ ಅಧಿಕ ಪ್ರಕರಣಗಳು ವರದಿಯಾಗಿವೆ. ಆದರೆ ವಿದ್ಯಾರ್ಥಿಗಳಲ್ಲಿ ರೋಗದ ಲಕ್ಷಣ ಇಲ್ಲವೆನ್ನುವುದು ಸಮಾಧಾನಕರ ವಿಷಯ. ಜಿಲ್ಲೆಯಲ್ಲಿ ಕೊರೋನದ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಂಬಂಧಿತ ಎಲ್ಲರಿಗೂ ಸೂಚನೆಗಳನ್ನು ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ತಿಳಿಸಿದ್ದಾರೆ.
ಮಣಿಪಾಲದ ಎಂಐಟಿಗೆ ಭೇಟಿ ನೀಡಿ, ಅಲ್ಲಿನ ಅಧಿಕಾರಿಗಳೊಂದಿಗೆ ಕ್ಯಾಂಪಸ್‌ನಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ ಬಳಿಕ ಭೇಟಿಯಾದ ಸುದ್ದಿಗಾರ ರೊಂದಿಗೆ ಅವರು ಮಾತನಾಡುತಿದ್ದರು.
ಎಂಐಟಿ ಕ್ಯಾಂಪಸ್‌ನಲ್ಲಿ ದೇಶ-ವಿದೇಶಗಳಿಂದ ಆಗಮಿಸಿದ 9000ಕ್ಕೂ ಅಧಿಕ ವಿದ್ಯಾರ್ಥಿಗಳೊಂದಿಗೆ 3000ಕ್ಕೂ ಅಧಿಕ ಸಿಬ್ಬಂದಿಗಳಿದ್ದಾರೆ. ಈಗಾಗಲೇ ಕ್ಯಾಂಪಸ್‌ನಲ್ಲಿ 9000ಕ್ಕೂ ಅಧಿಕ ಮಂದಿಗೆ ಕೋವಿಡ್‌ಗಾಗಿ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ. ಪಾಸಿಟಿವ್ ಬಂದವರಲ್ಲಿ ಸೋಂಕಿನ ಲಕ್ಷಣ ಇಲ್ಲವೆಂಬುದೇ ಸಮಾಧಾನದ ವಿಷಯ ಎಂದರು.
ಎಂಐಟಿ ಕ್ಯಾಂಪಸ್‌ನ್ನು ಈಗಾಗಲೇ ಕಂಟೈನ್‌ಮೆಂಟ್ ವಲಯವಾಗಿ ಘೋಷಿಸಲಾಗಿದೆ. ಪಾಸಿಟಿವ್ ಬಂದ ವಿದ್ಯಾರ್ಥಿಗಳು ಹೋಮ್ ಐಸೋಲೇಷನ್‌ನಲ್ಲಿದ್ದಾರೆ. ಅವರು ಕೊರೋನ ಪಸರಿಸುವ ವಾಹಕವಾಗುವ ಸಾಧ್ಯತೆ ಇರುವುದರಿಂದ ಎಚ್ಚರದಿಂದಿರುವಂತೆ ತಿಳಿಸಲಾಗಿದೆ. ಈಗಾಗಲೇ ಇವರೆಲ್ಲರ ಸೆಮಿಸ್ಟರ್ ಪರೀಕ್ಷೆಗಳು ಮುಗಿದಿರುವುದರಿಂದ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಮನೆಗೆ ಕಳುಹಿಸಲಾಗುವುದು ಎಂದರು.
ಇಲ್ಲಿ ವಿವಿದೆಡೆಗಳಿಂದ ಬಂದ ವಿದ್ಯಾರ್ಥಿಗಳು ಹೆಚ್ಚಿರುವುದರಿಂದ ಕೊರೋನ ಪಸರಿಸಿರ ಬಹುದು. ಅಲ್ಲದೇ ಕೊರೋನ ನಿಯಮಗಳನ್ನು ಪಾಲಿಸದೇ ಇರುವುದರಿಂದಲೂ ಸೋಂಕು ಹಬ್ಬಿರುವ ಸಾಧ್ಯತೆ ಇದೆ. ಅಲ್ಲದೇ ಪರೀಕ್ಷೆ ಮುಗಿದ ಬಳಿಕ ವಿದ್ಯಾರ್ಥಿಗಳು ಪಾರ್ಟಿ ಮಾಡಿರೊ ದ್ರಿಂದವೂ ಕೊರೋನ ಹಬ್ಬಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಎಂಐಟಿ ಹಾಗೂ ಮಾಹೆ ಆಡಳಿತಕ್ಕೆ ಸೂಚಿಸಲಾಗಿದೆ ಎಂದು ಸಚಿವ ಡಾ.ಸುಧಾಕರ ತಿಳಿಸಿದರು.
ಎರಡನೇ ಅಲೆ ಹೆಚ್ಚಳ: ರಾಜ್ಯಾದ್ಯಂತ ಕೋವಿಡ್‌ನ ಎರಡನೇ ಅಲೆಯಲ್ಲಿ ವಿದ್ಯಾರ್ಥಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸಿಟಿವ್ ಬರುತ್ತಿರುವುದು ನಿಜ. ಆದರೆ ಮಾರ್ಟಾಲಿಟಿ ರೇಟ್ (ಸಾವಿನ ಪ್ರಮಾಣ) ತುಂಬಾ ಕಡಿಮೆ ಪ್ರಮಾಣದಲ್ಲಿರುವುದು ನೆಮ್ಮದಿಯ ವಿಷಯ. ಸಾವಿನ ಸಂಖ್ಯೆಯನ್ನು ನಿಯಂತ್ರಿಸುವುದು ಸದ್ಯ ನಮ್ಮ ಗುರಿಯಾಗಿದೆ. ಇದರಲ್ಲಿ ನಾವು ಯಶಸ್ವಿಯಾಗಿದ್ದೇವೆ. ರೋಗದ ಲಕ್ಷಣ ಇಲ್ಲದವರಿಗೂ 14 ದಿನಗಳ ಕ್ವಾರಂಟೈನ್ ಕಡ್ಡಾಯ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖ್ಯಮಂತ್ರಿಗಳು ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ನಿನ್ನೆ ಪ್ರಕಟಿಸಿದ ಕ್ರಮಗಳ ಕುರಿತು ಪ್ರಶ್ನಿಸಿದಾಗ, ಮುಖ್ಯಮಂತ್ರಿಗಳು ಆಯಾ ಸಂದರ್ಭಗಳನ್ನು ಅವಲೋಕಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದೀಗ ಮುಂದಿನ ಎರಡು ವಾರಗಳಿಗೆ ಸಂಬಂಧಿಸಿ ಅವರು ತೀರ್ಮಾನ ಪ್ರಕಟಿಸಿದ್ದಾರೆ ಎಂದರು.
ಉಪಚುನಾವಣೆಯಲ್ಲಿ ಗೆಲವು: ರಾಜ್ಯದಲ್ಲಿ ನಡೆಯಲಿರುವ ಮೂರು ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಸಿಡಿ ಪ್ರಕರಣ ಬೀರುವ ಪ್ರಭಾವದ ಕುರಿತು ಪ್ರಶ್ನಿಸಿದಾಗ, ಉಪಚುನಾವಣೆಯ ಮೂರು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಸಿಡಿ ಪ್ರಕರಣದ ಕಾರಣಕ್ಕೆ ಬಿಜೆಪಿ ದೊಡ್ಡ ಗೆಲವು ದಾಖಲಿಸಿದೆ ಎಂದು ಡಾ.ಸುಧಾಕರ ಹೇಳಿದರು.