ಕುಲಪತಿ ಹುದ್ದೆ ಕೊಡಿಸುವುದಾಗಿ ವಂಚಿಸಿದ ಪ್ರಕರಣ: ರಾಮಸೇನೆಯ ಪ್ರಸಾದ್ ಅತ್ತಾವರನ ತೀವ್ರ ವಿಚಾರಣೆ
ಮಂಗಳೂರು, ಮಾ.30: ರಾಯಚೂರು ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆ ಕೊಡಿಸುವುದಾಗಿ ಹೇಳಿ ಮಂಗಳೂರು ವಿವಿಯ ಪ್ರಾಧ್ಯಾಪಕ ಡಾ.ಜೈ ಶಂಕರ್‌ರಿಂದ ಹಣ ಪಡೆದು ವಂಚಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ ಪ್ರಕರಣದ ಪ್ರಮುಖ ಆರೋಪಿ ರಾಮಸೇನೆಯ ಪ್ರಸಾದ್ ಅತ್ತಾವರನನ್ನು ಮಂಗಳೂರು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಪ್ರಸಾದ್ ಅತ್ತಾವರನನ್ನು ಸೋಮವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು ಮೂರು ದಿನಗಳ ಕಾಲ ಕಸ್ಟಡಿಗೆ ಒಪ್ಪಿಸುವಂತೆ ನ್ಯಾಯಾಧೀಶರ ಮುಂದೆ ನಿವೇದಿಸಿಕೊಂಡಿದ್ದರು. ಅದರಂತೆ ಪ್ರಸಾದ್ ಅತ್ತಾವರನನ್ನು ಕಸ್ಟಡಿಗೆ ಪಡೆದುಕೊಂಡ ಪೊಲೀಸರು ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕಲು ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಬೆಂಗಳೂರಿನಲ್ಲಿ ಪ್ರಸಾದ್ ಅತ್ತಾವರ ಮತ್ತಿತರರು ನಡೆಸಿರುವ ವ್ಯವಹಾರ, ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಬೆಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಮಧ್ಯೆ ಪ್ರಾಧ್ಯಾಪಕ ಡಾ. ಜೈಶಂಕರ್ ಮತ್ತು ಪ್ರಸಾದ್ ಅತ್ತಾವರನ ಜೊತೆ ಮಧ್ಯಸ್ಥಿಕೆ ವಹಿಸಿದ್ದ ವಿವೇಕ್ ಆಚಾರ್ಯ, ಗೋಪಾಲಕೃಷ್ಣ, ಭರತ್ ಮತ್ತು ಮಂಜು ಎಂಬವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಯಚೂರು ವಿವಿಯ ಕುಲಪತಿ ಹುದ್ದೆ ಕೊಡಿಸುವುದಾಗಿ ಹೇಳಿದ್ದ ರಾಮಸೇನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರನು ಪ್ರಾಧ್ಯಾಪಕ ಡಾ.ಜೈಶಂಕರ್ ಅವರಿಂದ 17.5 ಲಕ್ಷ ರೂ.ಪಡೆದು ಬಾಕಿ ಮೊತ್ತಕ್ಕೆ 3 ಖಾಲಿ ಚೆಕ್‌ಗಳನ್ನು ಪಡೆದಿದ್ದ. ಆದರೆ ವರ್ಷವಾದರೂ ಕುಲಪತಿ ಹುದ್ದೆ ಕೊಡಿಸಲಿಲ್ಲ. ಹಣ ಮರಳಿಸುವಂತೆ ಕೇಳಿದಾಗ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಈ ಬಗ್ಗೆ ಡಾ.ಜೈಶಂಕರ್ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಪ್ರಸಾದ್ ಅತ್ತಾವರನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದರೆ ಉಳಿದ ಆರೋಪಿಗಳ ಬಂಧನಕ್ಕೆ ಪ್ರಯತ್ನ ಸಾಗಿಸಿದ್ದಾರೆ.