×
Ad

ಪಡುಬಿದ್ರಿ: ಟೋಲ್‍ವಿನಾಯಿತಿಗೆ ಒತ್ತಾಯಿಸಿ ಪ್ರತ್ಯೇಕ ರಸ್ತೆ ನಿರ್ಮಿಸಿ ಪ್ರತಿಭಟನೆ

Update: 2021-03-30 22:26 IST

ಪಡುಬಿದ್ರಿ: ಹೆಜಮಾಡಿ ಕೋಡಿ ಭಾಗಕ್ಕೆ ಸಂಚರಿಸುವ  ಸರ್ವಿಸ್ ಬಸ್ಸುಗಳಿಗೆ, ಶಾಲಾ ಬಸ್ಸುಗಳಿಗೆ ಟೋಲ್ ವಿನಾಯಿತಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಹೆಜಮಾಡಿ ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ ಪ್ರತ್ಯೇಕ ರಸ್ತೆ ನಿರ್ಮಿಸಿದ್ದು, ಪ್ರತಿಭಟನೆಗೆ ಮಣಿದ ನವಯುಗ್ ತಕ್ಷಣದಿಂದ ಟೋಲ್ ವಿನಾಯಿತಿ ನೀಡಿದೆ.

ಹೆಜಮಾಡಿ ಒಳ ರಸ್ತೆಯ ಟೋಲ್‍ನಲ್ಲಿ ಈ ಹಿಂದೆ ನೀಡುತ್ತಿದ್ದ ವಿನಾಯಿತಿ ನಿಯಮಗಳನ್ನು ಫಾಸ್ಟ್‍ಟ್ಯಾಗ್ ಕಡ್ಡಾಯದ ಬಳಿಕ ಹೆಜಮಾಡಿ ನೋಂದಣಿಯ ಕಾರುಗಳಿಗೆ ಹಾಗೂ ಹೆಜಮಾಡಿ ಕೋಡಿಗೆ ತೆರಳುವ 4 ಬಸ್ಸುಗಳಿಗೆ ವಿನಾಯಿತಿ ನೀಡಲಾಗಿತ್ತು. ಆದರೆ ಕೆಲವು ದಿನಗಳ ಹಿಂದೆ ಹೆಜಮಾಡಿ ಕೋಡಿಗೆ ತೆರಳುವ ಬಸ್ಸುಗಳ ವಿನಾಯಿತಿಯನ್ನೂ ರದ್ದುಪಡಿಸಲಾಗಿತ್ತು. ಇದರಿಂದ ಅದನ್ನೇ ನಂಬಿದ್ದ ಈ ಭಾಗದ ವಿದ್ಯಾರ್ಥಿಗಳಿಗೆ ಹಾಗೂ ವಯೋವೃದ್ಧರಿಗೆ ತೀವ್ರ ಸಮಸ್ಯೆಯಾಗಿತ್ತು. ಇದನ್ನು ಮನಗಂಡು ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಾಣೇಶ್ ಹೆಜ್ಮಾಡಿ ನೇತೃತ್ವದಲ್ಲಿ ಎಲ್ಲಾ ಸದಸ್ಯರು ಹೆಜಮಾಡಿ ನವಯುಗ್ ಟೋಲ್‍ಗೆ ತೆರಳಿ ಲಿಖಿತ ಮನವಿ ಸಲ್ಲಿಸಿ ಟೋಲ್ ವಿನಾಯಿತಿಯನ್ನು ಮುಂದುವರಿಸು ವಂತೆ ಮನವಿ ಮಾಡಲಾಗಿತ್ತು. ಈ ಸಂದರ್ಭ ಮೌಖಿಕವಾಗಿ ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯಿತಾದರೂ ದಿನ ಕಳೆದ ಬಳಿಕ ವಿನಾಯಿತಿ ನೀಡಲು ನಿರಾಕರಿಸಲಾಗಿತ್ತು.

ಇದರಿಂದ ಅಸಮಾಧಾನಗೊಂಡ ಪಂಚಾಯಿತಿ ಸದಸ್ಯರು ಮಂಗಳವಾರ ಬೆಳಿಗ್ಗೆ ಹೆಜಮಾಡಿ ಒಳ ರಸ್ತೆಯ ಟೋಲ್ ಪಕ್ಕ ಪ್ರತ್ಯೇಕ ರಸ್ತೆ  ನಿರ್ಮಿಸಿ ಎಲ್ಲಾ ವಾಹನಗಳಿಗೆ ಟೋಲ್ ರಹಿತ ಪ್ರಯಾಣಕ್ಕೆ ಅವಕಾಶಮಾಡಿಕೊಟ್ಟರು. ಟೋಲ್ ಕಂಪನಿಯ ವ್ಯವಸ್ಥಾಪಕ ಶಿವಪ್ರಸಾದ್ ರೈಯವರನ್ನು ಘಟನಾ ಸ್ಥಳಕ್ಕೆ ಬಂದು ರಸ್ತೆ ಕಾಮಗಾರಿ ಸ್ಥಗಿತಗೊಳಿಸುವಂತೆ ವಿನಂತಿಸಿದರು.

ಕಾಪು ವೃತ್ತ ನಿರೀಕ್ಷಕ ಪ್ರಕಾಶ್ ಆಗಮಿಸಿ ಪ್ರತಿಭಟನಾಕಾರರ ಮನವೊಲಿಕೆಗೆ ಪ್ರಯತ್ನಿಸಿದರು. ತಕ್ಷಣ ಲಿಖಿತ ಭರವಸೆ ನೀಡಿದಲ್ಲಿ ರಸ್ತೆ ಬಂದ್ ಮಾಡುವ ಭರವಸೆ ನೀಡಿದ ಬಳಿಕ ನವಯುಗ್ ಕಂಪನಿಯು ತರಾತುರುಯಲ್ಲಿ ಲಿಖಿತ ಭರವಸೆ ನೀಡಿತು.

ವಾಹನಗಳಿಗೆ ರಿಯಾಯಿತಿ: ನವಯುಗ್ ಟೋಲ್‍ಗೆ ಸಂಬಂಧಪಟ್ಟ ಲೇನ್ 15 ಮತ್ತು 16ರಲ್ಲಿ(ಹೆಜಮಾಡಿ ಒಳ ರಸ್ತೆಯ ಟೋಲ್) ಸಂಚರಿಸುವ ಹೆಜಮಾಡಿ ವ್ಯಾಪ್ತಿಗೆ ಸಂಬಂಧಿಸಿದ ಎಲ್ಲಾ ಲಘು, ವಾಣಿಜ್ಯ ವಾಹನ. ಕಾರು ಮತ್ತು ಹೆಜಮಾಡಿ ಕೋಡಿ ಗ್ರಾಮಕ್ಕೆ ತೆರಳುವ ಖಾಸಗಿ ಬಸ್ಸು ಹಾಗೂ ಶಾಲಾ ವಾಹನಗಳಿಗೆ ಟೋಲ್ ವಿನಾಯಿತಿಯನ್ನು ನೀಡಿರುವುದಾಗಿ  ಲಿಖಿತ ಭರವಸೆಯಲ್ಲಿ ತಿಳಿಸಲಾಗಿದೆ.

ಬುಧವಾರ ಸಭೆ: ಬುಧವಾರ ನವಯುಗ್ ಕಂಪನಿಯ ಅಧಿಕಾರಿ ರಾಮಕೃಷ್ಣ ಹೆಜಮಾಡಿಗೆ ಆಗಮಿಸಿ ಹೆಜಮಾಡಿ ಗ್ರಾಮ ಪಂಚಾಯತ್ ಹಾಗೂ ಪೋಲಿಸ್ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಲಿದ್ದಾರೆ. ಇತರ ಬೇಡಿಕೆಗಳ ಬಗ್ಗೆ ಹಾಗೂ ಈಗಿರುವ ವಿನಾಯಿತಿಯನ್ನು ಶಾಶ್ವತಗೊಳಿಸುವ ಬಗ್ಗೆ ಚರ್ಚೆ ನಡೆಯಲಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News