ಉಡುಪಿ: ಕೋವಿಡ್‌ಗೆ ಇನ್ನೊಂದು ಬಲಿ; 56 ಮಂದಿಗೆ ಕೊರೋನ ದೃಢ
ಉಡುಪಿ, ಮಾ.31: ಜಿಲ್ಲೆಯಲ್ಲಿ ಬುಧವಾರ 90 ವರ್ಷ ಪ್ರಾಯದ ವೃದ್ಧೆಯೊಬ್ಬರು ಕೋವಿಡ್‌ಗೆ ಬಲಿಯಾಗಿದ್ದು, ದಿನದಲ್ಲಿ ಇನ್ನು 56 ಮಂದಿ ಕೋವಿಡ್‌ಗೆ ಹೊಸದಾಗಿ ಪಾಸಿಟಿವ್ ಬಂದಿದ್ದಾರೆ. ಅಲ್ಲದೇ ಇಂದು 141 ಮಂದಿ ಚಿಕಿತ್ಸೆಯಿಂದ ಗುಣಮುಖರಾದರೆ, ಸಕ್ರಿಯ ಸೋಂಕಿತರ ಸಂಖ್ಯೆ 667ಕ್ಕೆ ಇಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದ 56 ಮಂದಿಯಲ್ಲಿ 17 ಮಂದಿ ಎಂಐಟಿಯ ವಿದ್ಯಾರ್ಥಿಗಳು. ಇದರೊಂದಿಗೆ ಎಂಐಟಿ ಕ್ಯಾಂಪಸ್‌ನಲ್ಲಿ ಕೋವಿಡ್‌ಗೆ ಪಾಸಿಟಿವ್ ಬಂದವರ ಸಂಖ್ಯೆ 1042ಕ್ಕೇರಿದೆ. ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್‌ಗೆ ಚಿಕಿತ್ಸೆ ಪಡೆಯುತಿದ್ದ ಉಡುಪಿಯ 90ರ ವೃದ್ಧೆ ಮಂಗಳವಾರ ಮೃತಪಟ್ಟಿದ್ದಾರೆ. ತೀವ್ರವಾದ ಕೋವಿಡ್ ಹಾಗೂ ಕೆಮ್ಮುವಿನಿಂದ ನರಳುತಿದ್ದ ಇವರನ್ನು ಮಾ.27ರಂದು ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, 30ರಂದು ಮೃತಪಟ್ಟರು. ಇದರಿಂದ ಜಿಲ್ಲೆಯಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 192ಕ್ಕೇರಿದೆ.
ಬುಧವಾರ ಪಾಸಿಟಿವ್ ಬಂದವರಲ್ಲಿ 20 ಮಂದಿ ಪುರುಷರು ಹಾಗೂ 36 ಮಂದಿ ಮಹಿಳೆಯರು. ಇವರಲ್ಲಿ 39 ಮಂದಿ ಉಡುಪಿ ತಾಲೂಕಿನವರಾದರೆ, ಎಂಟು ಮಂದಿ ಕುಂದಾಪುರ ತಾಲೂಕು ಹಾಗೂ ಆರು ಮಂದಿ ಕಾರ್ಕಳ ತಾಲೂಕಿನವರು. ಹೊರಜಿಲ್ಲೆಯ ಮೂವರು ಉಡುಪಿಯಲ್ಲಿ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಮಂಗಳವಾರ 141 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 24,382 ಕ್ಕೇರಿದೆ. ಜಿಲ್ಲೆಯ 1514 ಮಂದಿ ಮಂಗಳವಾರ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 56 ಮಂದಿ ಸೇರಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 25,241 ಆಗಿದೆ ಎಂದು ಡಾ.ಸೂಡ ತಿಳಿಸಿದರು.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,20,024 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್ ಸೋಂಕಿನಿಂದ ಸತ್ತವರ ಸಂಖ್ಯೆ 192 ಆಗಿದೆ.