ಪಿ. ಭಾಸ್ಕರ ತಂತ್ರಿಗಳಿಗೆ ಸೇವಾಭೂಷಣ ಪ್ರಶಸ್ತಿ ಪ್ರದಾನ
ಉಡುಪಿ, ಮಾ.31: ಉಡುಪಿಯ ಯಕ್ಷಗಾನ ಕಲಾರಂಗ ಎಸ್.ಗೋಪಾಲಕೃಷ್ಣ ಇವರ ಸಂಸ್ಮರಣೆಯಲ್ಲಿ ನೀಡುವ ‘ಸೇವಾ ಭೂಷಣ ಪ್ರಶಸ್ತಿ’ಯನ್ನು ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಅಧಿಕಾರಿ ಪಿ.ಭಾಸ್ಕರ ತಂತ್ರಿ ಅವರಿಗೆ ಪ್ರದಾನ ಮಾಡಲಾಯಿತು.
ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪಿ.ಭಾಸ್ಕರ ತಂತ್ರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ತಂತ್ರಿಗಳಂಥ ಸಮರ್ಪಣಾಭಾವದ ಕಾರ್ಯಕರ್ತರಿಂದಾಗಿ ಯಕ್ಷಗಾನ ಕಲಾರಂಗ ಇಷ್ಟೊಂದು ಸಮಾಜಮುಖೀ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗಿದೆ ಎಂದರು.
ಸಂಸ್ಥೆಯೊಂದಿಗಿನ ಒಡನಾಟ ನನಗೆ ಹಿತಾನುಭವ ನೀಡಿದೆ. ಸ್ವಾಮೀಜಿ ಅವರ ದಿವ್ಯಹಸ್ತದಿಂದ ಪ್ರಶಸ್ತಿ ಪಡೆದದ್ದು ನನ್ನ ಬದುಕಿನ ಸಾರ್ಥಕ್ಯದ ಕ್ಷಣ ಎಂದು ಸಮ್ಮಾನ ಸ್ವೀಕರಿಸಿ ಭಾಸ್ಕರ ತಂತ್ರಿ ಹೇಳಿದರು.
ಈ ಸಂದರ್ಭದಲ್ಲಿ ನಿರ್ಮಲಾ ಭಾಸ್ಕರ ತಂತ್ರಿ, ನಿಕಟಪೂರ್ವ ಅಧ್ಯಕ್ಷ ಕೆ. ಗಣೇಶ್ ರಾವ್, ಉಪಾಧ್ಯಕ್ಷ ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಮನೋಹರ್ ಕೆ ಮತ್ತು ಪ್ರೊ. ಸದಾಶಿವ ರಾವ್ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರೆ, ಉಪಾಧ್ಯಕ್ಷ ಎಸ್. ವಿ.ಭಟ್ ಎಸ್. ಗೋಪಾ ಲಕೃಷ್ಣರ ಸಂಸ್ಮರಣೆ ಮಾಡಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ.ಹೆಗಡೆ ತಂತ್ರಿಗಳನ್ನು ಅಭಿನಂದಿಸಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಎಚ್.ಎನ್. ಶೃಂಗೇಶ್ವರ್ ವಂದಿಸಿದರು.