×
Ad

ಕುಲಪತಿ ಹುದ್ದೆ ಪಡೆಯಲು ಲಂಚ ನೀಡಿದ ಪ್ರಕರಣ: ಕಾರಣ ಕೇಳಿ ಪ್ರಾಧ್ಯಾಪಕರಿಗೆ ನೋಟಸ್ ನೀಡಲು ಆಗ್ರಹ

Update: 2021-03-31 21:53 IST

ಮಂಗಳೂರು, ಮಾ.31: ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ಎಂ.ಜೈಶಂಕರ್ ಕುಲಪತಿ ಹುದ್ದೆಗಾಗಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ.ವನ್ನು ನೀಡಿ ಮೋಸ ಹೋಗಿರುವ ಹಿನ್ನೆಲೆಯಲ್ಲಿ ಪ್ರಾಧ್ಯಾಪಕರಿಗೆ ಕಾರಣ ಕೇಳಿ ನೋಟಿಸ್ ನೀಡಲು ಮತ್ತು 24 ಗಂಟೆಯೊಳಗೆ ವರದಿ ತರಿಸಿಕೊಂಡು ಸಿಂಡಿಕೇಟ್ ಸಭೆಯ ಮುಂದಿಡಬೇಕು ಎಂದು ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ರಮೇಶ್ ಕೆ. ಅವರು ಮಂಗಳೂರು ವಿವಿ ಕುಲಪತಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ವ್ಯಕ್ತಿಯಿಂದ ವಂಚನೆಗೊಳಗಾಗಿರುವೆ ಎಂದು ಪ್ರಾಧ್ಯಾಪಕ ಜೈಶಂಕರ್ ಪೊಲೀಸರಿಗೆ ದೂರು ನೀಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿ ಪ್ರಾಧ್ಯಾಪಕರು ತಮ್ಮ ಅಥವಾ ಸಿಂಡಿಕೇಟ್‌ನ ಅನುಮತಿ ಪಡೆದಿರುತ್ತಾರೆಯೇ. ಪ್ರಾಧ್ಯಾಪಕರನ್ನು ನೇಮಕ ಮಾಡುವ ಪ್ರಾಧಿಕಾರ ಸಿಂಡಿಕೇಟ್ ಆಗಿರುವುದರಿಂದ ಸಿಂಡಿಕೇಟ್‌ನ ಗಮನಕ್ಕೆ ತರದೆ ನೇರವಾಗಿ ಪೊಲೀಸ್ ದೂರು ನೀಡಿ ಮಂಗಳೂರು ವಿವಿಯ ಘನತೆಗೆ ಅಗೌರವ ತೋರಿರುವುದು ಎಷ್ಟು ಸರಿ ಎಂದು ರಮೇಶ್ ಪ್ರಶ್ನಿಸಿದ್ದಾರೆ.

ಯಾವುದೇ ಹುದ್ದೆಗೆ ಲಂಚದ ರೂಪದಲ್ಲಿ ಹಣವನ್ನು ನೀಡುವುದು ಸರಿಯಲ್ಲ. ಇದರಿಂದಾಗಿ ಸಿಂಡಿಕೇಟ್ ಮತ್ತು ಸರಕಾರವನ್ನು ಜನರು ತುಚ್ಛ ಭಾವನೆಯಿಂದ ನೋಡುವ ಸಂದರ್ಭ ಬರಬಹುದು. ಹಾಗಾಗಿ ಕಾರಣ ಕೇಳಿ ನೊಟೀಸ್ ನೀಡಿ 24 ಗಂಟೆಯೊಳಗೆ ವರದಿ ತರಿಸಿಕೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News