ಲಿಂಗತ್ವ ಅಂತರ ರ‍್ಯಾಂಕಿಂಗ್ ನಲ್ಲಿ 140ನೇ ಸ್ಥಾನಕ್ಕೆ ಇಳಿದ ಭಾರತ: ವರದಿ

Update: 2021-03-31 16:43 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಮಾ.31: ಜಾಗತಿಕ ಆರ್ಥಿಕ ವೇದಿಕೆಯ ಲಿಂಗತ್ವ ಅಂತರ ಸೂಚ್ಯಂಕ ರ್ಯಾಂಕಿಂಗ್ ಕುರಿತ ವಿಶ್ವದ 156 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು 140 ನೇ ಸ್ಥಾನಕ್ಕೆ ಜಾರಿದೆ. 2020ರಲ್ಲಿ ಭಾರತವು 112 ಸ್ಥಾನದಲ್ಲಿದ್ದರೆ, ಈ ಬಾರಿ 28 ಸ್ಥಾನಗಳಷ್ಟು ಕುಸಿತ ಕಂಡಿದ್ದು ಲಿಂಗತ್ವ  ಅಂತರ ನಿವಾರಣೆಯಲ್ಲಿ ಕಳಪೆಸಾಧನೆಗೈದ ದಕ್ಷಿಣ ಏಶ್ಯದ ಮೂರನೆ ರಾಷ್ಟ್ರವೆನಿಸಿಕೊಂಡಿದೆ.

ಉದ್ಯೋಗ, ರಾಜಕೀಯ, ಸಾಮಾಜಿಕ ಮತ್ತಿತರ ಕ್ಷೇತ್ರಗಳಲ್ಲಿ ಸ್ತ್ರೀ ಹಾಗೂ ಪುರುಷರಿಗೆ ದೊರೆಯುವ ಅವಕಾಶಗಳಲ್ಲಿನ ಅಂತರವನ್ನು ಈ ವರದಿಯು ವಿಶ್ಲೇಷಿಸಿದೆ.

 ಭಾರತವು ಈವರೆಗೆ 62.5 ಶೇಕಡದಷ್ಟು ಪ್ರಮಾಣದಲ್ಲಿ ಮಾತ್ರವೇ ಲಿಂಗತಾರತಮ್ಯವನ್ನು ನಿವಾರಿಸುವಲ್ಲಿ ಸಫಲವಾಗಿದೆ ಎಂದು ವರದಿ ತಿಳಿಸಿದೆ.

ಆರ್ಥಿಕ ಪಾಲ್ಗೊಳ್ಳುವಿಕೆ ಹಾಗೂ ಅವಕಾಶಗಳ ಉಪ ಸೂಚ್ಯಂಕದಲ್ಲಿಯೂ ಅಲ್ಪಪ್ರಮಾಣದಲ್ಲಿ ಲಿಂಗತ್ವ ಅಂತರ ಹೆಚ್ಚಾಗಿದೆ ಎಂದು ವರದಿ ಹೇಳಿದೆ. ಭಾರತದಲ್ಲಿ ಲಿಂಗತ್ವ ಅಂತರದಲ್ಲಿ ಈ ವರ್ಷ ಶೇಕಡ ಮೂರರಷ್ಟು ಹೆಚ್ಚಾಗಿದ್ದು, ಪ್ರಸಕ್ತ ಶೇ.32.6ರಷ್ಟು ಅಂತರ ಕಂಡುಬಂದಿದೆ ಎಂದು ವರದಿ ಹೇಳಿದೆ.

 ರಾಜಕೀಯ ಸಬಲೀಕರಣ ಕುರಿತ ಉಪಸೂಚ್ಯಂಕದಲ್ಲಿ ಬಹುತೇಕ ಕುಸಿತ ಉಂಟಾಗಿದ್ದು, ಭಾರತವು 13.5 ಶೇಕಡ ಅಂಕಗಳಷ್ಟು ಹಿನ್ನಡೆ ಸಾಧಿಸಿದೆ. 2019ರಲ್ಲಿ ಶೇ.23.1ರಷ್ಟಿದ್ದ ಮಹಿಳಾ ಸಚಿವರ ಸಂಖ್ಯೆ 2021ರ ಸಾಲಿನಲ್ಲಿ ಶೇ.9.1ಕ್ಕೆ ಕುಸಿದಿದೆ ಎಂದು ವರದಿ ಹೇಳಿದೆ.

ಮಹಿಳಾ ಕಾರ್ಮಿಕ ಶಕ್ತಿಯ ಪಾಲ್ಗೊಳ್ಳುವಿಕೆಯ ಪ್ರಮಾಣ ಕಡಿಮೆಯಾಗಿರುವುದೇ, ಭಾರತವು ಲಿಂಗತ್ವ ಅಂತರದ ರ್ಯಾಂಕಿಂಗ್‌ನಲ್ಲಿ ಕುಸಿತವನ್ನು ಕಾಣಲು ಪ್ರಮುಖ ಕಾರಣವಾಗಿದೆ. ಭಾರತದ ಮಹಿಳಾ ಕಾರ್ಮಿಕ ಶಕ್ತಿಯ ಪಾಲ್ಗೊಳ್ಲುವಿಕೆ ದರವು ಶೇ.24.8ರಷ್ಟಿದ್ದುದು ಪ್ರಸಕ್ತ ಸಾಲಿನಲ್ಲಿ ಶೇ.22.3ಕ್ಕೆ ಕುಸಿದಿದೆ. ಇದರ ಜತೆಗೆ ವೃತ್ತಿಪರ ಹಾಗೂ ತಾಂತ್ರಿಕ ಕ್ಷೇತ್ರದಲ್ಲಿ ಮಹಿಳೆಯರ ಪಾಲು 29.2 ಶೇಕಡ ಇಳಿದಿದೆ. ಹಿರಿಯ ಹಾಗೂ ಆಡಳಿತ ನಿರ್ವಹಣಾ ಹುದ್ದೆಗಳಲ್ಲಿಯೂ ಮಹಿಳೆಯರ ಪಾಲು ಕೆಳಮಟ್ಟದಲ್ಲಿ ದ್ದು ,ಕೇವಲ ಶೇ.14.6ರಷ್ಟು ಹುದ್ದೆಗಳನ್ನು ಮಹಿಳೆಯರು ಆಲಂಕರಿಸಿದ್ದಾರೆ. ಅಲ್ಲದೆ ಕೇವಲ ಶೇ.8.9ರಷ್ಟು ಸಂಸ್ಥೆಗಳಲ್ಲಿ ಮಾತ್ರ ಮಹಿಳೆಯರು ಉನ್ನತ ಆಡಳಿತ ನಿರ್ವಹಣಾ ಹುದ್ದೆಗಳಲ್ಲಿದ್ದಾರೆ ಎಂದು ವರದಿ ತಿಳಿಸಿದೆ.

ಭಾರತದಲ್ಲಿ ಮಹಿಳೆಯರ ಆದಾಯವು, ಪುರುಷರ ಆದಾಯದ 5ನೇ ಒಂದರಷ್ಟಿದೆ ಎಂದು ವರದಿ ಹೇಳಿದೆ.

 ಆರೋಗ್ಯ ಹಾಗೂ ಬದುಕುಳಿಯುವಿಕೆ ಕುರಿತ ಉಪಸೂಚ್ಯಂಕ ಅಂಕಿಅಂಶಗಲ್ಲಿಯೂ ಮಹಿಳೆಯರ ವಿರುದ್ದ ತಾರತಮ್ಯವು ಪ್ರತಿಫಲಿತವಾಗಿದೆ ಎಂದು ವಿಶ್ವ ಆರ್ಥಿಕ ವೇದಿಕೆ ಯ ವರದಿ ಹೇಳಿದೆ.

ಭ್ರೂಣ ಲಿಂಗ ಪತ್ತೆ ಅಧಿಕ ಪ್ರಮಾಣದಲ್ಲಿ ಪ್ರಚಲಿತದಲ್ಲಿರುವುದರಿಂದ ಭಾರತದಲ್ಲಿ ಶಿಶುಗಳ ಲಿಂಗಾನುಪಾತದಲ್ಲಿಯೂ ಭಾರೀ ಅಂತರ ಕಂಡುಬಂದಿರುವುದಾಗಿ ವರದಿ ಹೇಳಿದೆ. ಇದರ ಜೊತೆಗೆ ಪ್ರತಿ ನಾಲ್ವರು ಮಹಿಳೆಯರ ಪೈಕಿ ಒಬ್ಬರಿಗಿಂತಲೂ ಹೆಚ್ಚು ಮಂದಿ ತನ್ನ ಜೀವಿತಾವಧಿಯಲ್ಲಿ ಹತ್ತಿರದ ಸಂಬಂಧಿಗಳಿಂದ ಹಿಂಸಾಚಾರಕ್ಕೊಳಗಾಗಿರುವುದಾಗಿ ವರದಿ ತಿಳಿಸಿದೆ.

ಜಗತ್ತಿನ ಪ್ರಾಂತಗಳ ಪೈಕಿ ದಕ್ಷಿಣ ಏಶ್ಯವು ಲಿಂಗತ್ವ ಅಂತರ ರ್ಯಾಂಕಿಂಗ್‌ನಲ್ಲಿ ಅತ್ಯಂತ ಕಳಪೆ ಸಾಧನೆ ಪ್ರದರ್ಶಿಸಿದೆ ಬಾಂಗ್ಲಾ ದೇಶವು ಶೇ.71.9ರಷ್ಟು ಲಿಂಗತ್ವ ಅಂತರವನ್ನು ನಿವಾರಿಸಿದೆಯಾದರೆ, ಅಫಘಾನಿಸ್ತಾನವು ಕೇವಲ 44.4 ಶೇಕಡ ಲಿಂಗತ್ವ ಅಂತರವನ್ನು ನಿವಾರಿಸಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News