×
Ad

ಬೆಳ್ತಂಗಡಿ: ದನ ಸಾಗಾಟದ ಆರೋಪದಲ್ಲಿ ಇಬ್ಬರಿಗೆ ಸಂಘ ಪರಿವಾರ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆ

Update: 2021-04-01 11:10 IST

ಬೆಳ್ತಂಗಡಿ, ಎ.1: ದನ ಸಾಗಾಟದ ಆರೋಪ ಹೊರಿಸಿ ಇಬ್ಬರ ಮೇಲೆ ಸಂಘ ಪರಿವಾರದ ಕಾರ್ಯಕರ್ತರು ಸೇರಿದಂತೆ ಸುಮಾರು 50 ಮಂದಿಯ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಎಂಬಲ್ಲಿ ಬುಧವಾರ ರಾತ್ರಿ 11 ಗಂಟೆಗೆ ನಡೆದಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಕಪ್ ಚಾಲಕ ಅಬ್ದುಲ್ ರಹೀಂ ಮತ್ತು ಮುಹಮ್ಮದ್ ಮುಸ್ತಫ ಹಲ್ಲೆಗೊಳಗಾದವರು. ಗಾಯಾಳುಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿಯ ಪಿಕಪ್ ವಾಹನ ಹೊಂದಿರುವ ಅಬ್ದುಲ್ ರಹೀಂ ಬುಧವಾರ ಸಂಜೆ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಪಿಕಪ್ ಬಾಡಿ ಕೆಲಸ ಮಾಡಿಸಲು ಬಂದಿದ್ದು, ಜೊತೆಗೆ ಮುಹಮ್ಮದ್ ಮುಸ್ತಫರನ್ನು ಕರೆದುಕೊಂಡು ಬಂದಿದ್ದರೆನ್ನಲಾಗಿದೆ. ಆದರೆ ಕೆಲಸ ಆಗದ ಕಾರಣ ಅಬ್ದುಲ್ ರಹೀಂ ಸವಣಾಲಿನಲ್ಲಿರುವ ತನ್ನ ಸಂಬಂಧಿಕರ ಮನೆಗೆ  ಹೋಗಿ ಊಟ ಮಾಡಿ ರಾತ್ರಿ 11 ಗಂಟೆ ಸುಮಾರಿಗೆ ವಾಪಸ್ ಬರುತ್ತಿದ್ದ ವೇಳೆ ಈ ಹಲ್ಲೆ ನಡೆದಿದೆ. ಇವರ ಪಿಕಪ್ ಅನ್ನು ಸವಣಾಲಿನಿಂದ ಕೆಲ ವ್ಯಕ್ತಿಗಳು ಬೈಕ್, ಕಾರುಗಳಲ್ಲಿ ಬೆನ್ನಟ್ಟಿದ್ದಾರೆ ಮತ್ತು ಮೇಲಂತಬೆಟ್ಟು ತಲುಪುತ್ತಿದ್ದಂತೆ ಬೈಕ್ ನಲ್ಲಿ ಬಂದು ಪಿಕಪ್ ಅನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು “ನೀವು ದನ ಕಳ್ಳರು, ನಮ್ಮ ಊರಿನಿಂದ ದನ ಕಳ್ಳತನ ಮಾಡಲು ಬಂದಿದ್ದಿರಿ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಬ್ದುಲ್ ರಹೀಂ ಹಾಗೂ ಮುಹಮ್ಮದ್ ಮುಸ್ತಫರನ್ನು ಪಿಕಪ್ ನಿಂದ ಹೊರಗೆಳೆದು ರಾಡ್, ದೊಣ್ಣೆಗಳಿಂದ ಮನಸ್ಸೋ ಇಚ್ಛೆ ಥಳಿಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ದುಷ್ಕರ್ಮಿಗಳ ದಾಳಿಯಿಂದ ಅಬ್ದುಲ್ ರಹೀಂ ಅವರ ಒಂದು ಕಣ್ಣಿಗೆ, ಹಣೆಗೆ ಗಾಯವಾಗಿದೆ. ಉಳಿದಂತೆ ಇಬ್ಬರ ಬೆನ್ನು ಸೇರಿದಂತೆ ದೇಹದೆಲ್ಲೆಡೆ ಬಾಸುಂಡೆ ಬಂದಿವೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಗುಂಪನ್ನು ಚದುರಿಸಿ ಗಾಯಗೊಂಡ ಇಬ್ಬರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಶಿಫಾರಸು ಮಾಡಲಾಗಿದೆ.

ನಾಲ್ವರ ಬಂಧನ, ಕೆಲವರು ವಶಕ್ಕೆ: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ನಾಲ್ವರನ್ನು ಬಂಧಿಸಿರುವ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


ಪೊಲೀಸರು ಬರದಿದ್ದರೆ ಅವರು ನಮ್ಮನ್ನು ಕೊಲ್ಲುತ್ತಿದ್ದರು

ಪಿಕಪಿನ ಕೆಲಸಕ್ಕೆಂದು ಬೆಳ್ತಂಗಡಿಗೆ ಬಂದವರು ಕೆಲಸ ಆಗಲಿಲ್ಲ ಎಂದು ಸಂಬಂಧಿಕರ ಮನೆಗೆ ಊಟಕ್ಕೆಂದು ಹೋಗಿದ್ದೆವು. ನಾವು ಸಂಬಂಧಿಕರ ಮನೆಯಿಂದ ಬರುವ ವೇಳೆಗೆ ಮೊದಲು ಪಿಕಪಿನ ಹಿಂದಿನಿಂದ ಬಂದ ಕೆಲವರು ಕಲ್ಲೆಸೆದರು. ನಾವು ಪಿಕಪ್ ನಿಲ್ಲಿಸಿ ನೋಡಿ ಮುಂದೆ ಬಂದೆವು. ಸ್ವಲ್ಪ ಮುಂದೆ ಬಂದಾಗ  ಬೈಕಿನಲ್ಲಿ ಬಂದವರು ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿದರು. ವಾಹನದಿಂದ ಇಳಿದು ಕೇಳಿದಾಗ, “ನೀವು ದನ ಕಳ್ಳತನಕ್ಕೆ ಬಂದಿದ್ದೀರಾ” ಎಂದು ಹಲ್ಲೆಗೆ ಮುಂದಾದರು. ಇದೇವೇಳೆಗೆ ಒಂದು ಕಾರು ಮತ್ತು ಬೈಕ್ ಗಳಲ್ಲಿ ಸುಮಾರು ಐವತ್ತರಷ್ಟು ಮಂದಿ ಅಲ್ಲಿ ಸೇರಿದರು. ನಾವು ದನ ಸಾಗಾಟ ಮಾಡುತ್ತಿಲ್ಲ ಎಂದು ಎಷ್ಟು ಹೇಳಿದರೂ ಕೇಳದೆ ಹಲ್ಲೆ ನಡೆಸಿದರು. ಸುಮಾರು ಅರ್ದ ಗಂಟೆಯ ಕಾಲ ಎಲ್ಲ ಸೇರಿ ಹಲ್ಲೆ ಮಾಡಿದ್ದಾರೆ. ಯಾರೂ ಬಿಡಿಸಲು ಮುಂದೆ ಬರಲಿಲ್ಲ ಕೊನೆಗೂ ಪೋಲೀಸರು ಬಂದ ಬಳಿಕವಷ್ಟೇ ಹಲ್ಲೆಕೋರರು ಚದುರಿದರು. ಈ ವೇಳೆಗೆ ಪೊಲೀಸರು ಬರದಿದ್ದರೆ ಅವರು ನಮ್ಮನ್ನು ಕೊಲ್ಲುತ್ತಿದ್ದರು.

-ಅಬ್ದುಲ್ ರಹೀಂ, ಪಿಕಪ್ ಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News