ಬಂಗಾಳ, ಅಸ್ಸಾಂನಲ್ಲಿ 2ನೇ ಹಂತದ ಮತದಾನ ಆರಂಭ, ಗಮನ ಸೆಳೆಯುತ್ತಿರುವ ನಂದಿಗ್ರಾಮ

Update: 2021-04-01 06:35 GMT

ಹೊಸದಿಲ್ಲಿ: ಪಶ್ಚಿಮಬಂಗಾಳ ಹಾಗೂ ಅಸ್ಸಾಂನಲ್ಲಿ ಎರಡನೇ ಹಂತದ ಮತದಾನ ಗುರುವಾರ ಬೆಳಗ್ಗೆ ಆರಂಭವಾಗಿದೆ.  ಬೆಳಗ್ಗೆ 11 ಗಂಟೆಯ ಹೊತ್ತಿಗೆ ಬಂಗಾಳದಲ್ಲಿ ಶೇ.30ರಷ್ಟು ಮತದಾನವಾಗಿದ್ದರೆ, ಅಸ್ಸಾಂನಲ್ಲಿ ಶೇ.21ರಷ್ಟು ಮತದಾನವಾಗಿತ್ತು.

2ನೇ ಹಂತದಲ್ಲಿ ಬಂಗಾಳದ ಒಟ್ಟು 30 ಸೀಟುಗಳು ಹಾಗೂ ಅಸ್ಸಾಂನ 39 ಸೀಟುಗಳಲ್ಲಿ ಮತದಾನ ನಡೆಯುತ್ತಿದೆ. ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅವರ ಮಾಜಿ ಆಪ್ತ, ಬಿಜೆಪಿಯ ಅಭ್ಯರ್ಥಿ ಸುವೇಂದು ಅಧಿಕಾರಿ ಸ್ಪರ್ಧಿಸುತ್ತಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲೂ ಇಂದು ಚುನಾವಣೆ ನಡೆಯುತ್ತಿದ್ದು, ಇದು ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಅಸ್ಸಾಂನಲ್ಲಿ ಐವರು ಸಚಿವರು, ಉಪ ಸ್ಪೀಕರ್ , ವಿರೋಧ ಪಕ್ಷದ ಕೆಲವು ಪ್ರಮುಖ ನಾಯಕರು 2ನೇ ಹಂತದ ಮತದಾನದಲ್ಲಿ ಕಣದಲ್ಲಿದ್ದಾರೆ.

ಸಂಸಬಾದ್ ಕಾಂಚನ್ ಪ್ರದೇಶದಲ್ಲಿ ಇಂದು ಓರ್ವ ಬಿಜೆಪಿ ಕಾರ್ಯಕರ್ತನಿಗೆ ಥಳಿಸಲಾಗಿದೆ. ನಂದಿಗ್ರಾಮದ ಮಹೇಶ್ ನಗರದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದು, ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಒಟ್ಟಾರೆ ನಂದಿಗ್ರಾಮದ ಪರಿಸ್ಥಿತಿ ಶಾಂತವಾಗಿದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.

ನಂದಿಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ, ಟಿಎಂಸಿ ಮೇಲೆ ಆರೋಪ

ಪಶ್ಚಿಮಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತ ತನ್ನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಇದು ಮತದಾನದ ಪ್ರದೇಶದಲ್ಲಿ ಆತಂಕ ಮೂಡಿಸಿದೆ.

ಬಿಜೆಪಿ ಕಾರ್ಯಕರ್ತ ಉದಯ ಶಂಕರ್ ಬಥುವಾಬಾದ್ ಗ್ರಾಮದ ತನ್ನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. 

ಮಾ.30ರಂದು ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿಗೆ ಬೆಂಬಲವಾಗಿ ಚಿತ್ರನಟ ಮಿಥುನ್ ಚಕ್ರವರ್ತಿ ಭಾಗವಹಿಸಿದ್ದ ರೋಡ್ ಶೋನಲ್ಲಿ ಉದಯ ಶಂಕರ್ ಪಾಲ್ಗೊಂಡಿದ್ದ ಬಳಿಕ ಟಿಎಂಸಿ ಪಕ್ಷ ಅವರಿಗೆ ಬೆದರಿಕೆ ಕರೆ ಮಾಡಿ ಅವರ ಮೇಲೆ ಭಾರೀ ಒತ್ತಡ ಹೇರಿತ್ತು ಎಂದು ಬಿಜೆಪಿ ಆರೋಪಿಸಿದೆ. ಈ ಘಟನೆಯ ವಿಚಾರಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News