ಸೊಸೆಯ ಖಾತೆಯಲ್ಲಿ ವೀಡಿಯೋ ಪ್ರಕಟಿಸಿದ ಟ್ರಂಪ್: ತಕ್ಷಣ ವೀಡಿಯೋ ಕಿತ್ತೊಗೆದ ಫೇಸ್ ಬುಕ್ !

Update: 2021-04-01 10:48 GMT

ವಾಷಿಂಗ್ಟನ್ : ಕ್ಯಾಪಿಟೊಲ್ ಹಿಲ್ ದಾಳಿಕೋರರನ್ನು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೇಸ್ ಬುಕ್ ಮೂಲಕ ಪ್ರಚೋದಿಸಲು ಯತ್ನಿಸಿದ್ದರೆಂದು ಕಂಡು ಬಂದ ನಂತರ ಟ್ರಂಪ್ ಮೇಲೆ ಫೇಸ್ ಬುಕ್ ಹೇರಿದ ನಿಷೇಧ ಇನ್ನೂ ಜಾರಿಯಲ್ಲಿರುವಾಗಲೇ ಇತ್ತೀಚೆಗೆ ಟ್ರಂಪ್ ಅವರು ತಮ್ಮ ಸೊಸೆ ಲಾರಾ ಟ್ರಂಪ್ ಅವರ ಫೇಸ್ ಬುಕ್ ಪುಟದಲ್ಲಿ ಕಾಣಿಸಿಕೊಂಡಿದ್ದಾರೆ.  ಇದನ್ನು ಗಮನಿಸಿದ ಫೇಸ್ ಬುಕ್ ತಕ್ಷಣ ಸಂಬಂಧಿತ ವೀಡಿಯೋ  ತೆಗೆದು ಹಾಕಿದೆಯಲ್ಲದೆ ಟ್ರಂಪ್ ಅವರಿಗೆ ಎಚ್ಚರಿಕೆಯನ್ನೂ ನೀಡಿದೆ. ಲಾರಾ ಅವರು ಟ್ರಂಪ್ ಪುತ್ರ ಎರಿಕ್ ಪತ್ನಿಯಾಗಿದ್ದಾರೆ.

ಟ್ರಂಪ್ ಅವರು ನೀಡಿದ್ದ ಸಂದರ್ಶನವೊಂದರ ವೀಡಿಯೋವನ್ನು  ಲಾರಾ ಅವರ ಫೇಸ್ ಬುಕ್ ಪುಟದಲ್ಲಿ ಪೋಸ್ಟ್ ಮಾಡಲಾಗಿತ್ತು. ಆದರೆ ಆ ಪೋಸ್ಟ್ ನಲ್ಲಿ "ಡೊನಾಲ್ಡ್ ಟ್ರಂಪ್ ಅವರ ದನಿ" ಕೇಳುತ್ತಿರುವುದರಿಂದ ಅದನ್ನು ತೆಗೆದು ಹಾಕಲಾಗಿದೆ ಎಂಬ ಮಾಹಿತಿ ನೀಡಿ ಫೇಸ್ ಬುಕ್ ಲಾರಾಗೆ ನಂತರ ಇಮೇಲ್ ಕಳುಹಿಸಿತ್ತು.

ತಮಗೆ ಫೇಸ್ ಬುಕ್‍ನಿಂದ ದೊರೆತ ಇಮೇಲ್‍ನ ಸ್ಕ್ರೀನ್ ಶಾಟ್ ಅನ್ನು ಲಾರಾ ಪೋಸ್ಟ್ ಮಾಡಿದ್ದಾರೆ. "ಇನ್ನು ಮುಂದೆ ಡೊನಾಲ್ಡ್ ಟ್ರಂಪ್ ಅವರ ದನಿಯಿರುವ ಯಾವುದೇ ಪೋಸ್ಟ್ ಹಾಕಿದರೂ ಅವುಗಳನ್ನೂ ತೆಗೆದು ಹಾಕಲಾಗುವುದಲ್ಲದೆ ಸಂಬಂಧಿತ ಖಾತೆ ವಿರುದ್ಧ ಹೆಚ್ಚುವರಿ ನಿರ್ಬಂಧಗಳನ್ನು ಹೇರಲಾಗುವುದು" ಎಂದು ಆ ಇಮೇಲ್‍ನಲ್ಲಿ ಬರೆಯಲಾಗಿದೆ. ಟ್ರಂಪ್ ಅವರ ಫೇಸ್ ಬುಕ್ ಹಾಗೂ ಇನ್‍ಸ್ಟಾಗ್ರಾಂ ಖಾತೆಗಳನ್ನು ಈ ಹಿಂದೆಯೇ ಬ್ಲಾಕ್ ಮಾಡಿರುವ ಕುರಿತೂ ಇಮೇಲ್‍ನಲ್ಲಿ ಉಲ್ಲೇಖಿಸಲಾಗಿದೆ.

ಈ ನಡುವೆ ಟ್ರಂಪ್ ಅವರು ತಮ್ಮದೇ ಆದ ಸಾಮಾಜಿಕ ಜಾಲತಾಣವನ್ನು ಆರಂಭಿಸಲಿದ್ದಾರೆಂಬ ಸುದ್ದಿಯೂ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News