ಭಟ್ಕಳ: ನಾನು ಶಾಸಕನಾಗಿರುವವರೆಗೆ ಮೀನುಮಾರುಕಟ್ಟೆ ಸ್ಥಳಾಂತರಕ್ಕೆ ಅವಕಾಶ ಮಾಡಿಕೊಡಲ್ಲ; ಸುನಿಲ್ ನಾಯ್ಕ
ಭಟ್ಕಳ: ಭಟ್ಕಳ ಪುರಸಭೆಯು ಈಗಿದ್ದ ಮೀನುಮಾರುಕಟ್ಟೆಯನ್ನು ಹೊಸದಾಗಿ ನಿರ್ಮಿಸಿದ ಮೀನುಮಾರುಕಟ್ಟೆಗೆ ಸ್ಥಳಾಂತರಿಸುವ ಆದೇಶಕ್ಕೆ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರ ಶಾಸಕ ಸುನಿಲ್ ನಾಯ್ಕ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದೊಂದು ಅವೈಜ್ಞಾನಿಕ ನಿರ್ಧಾರವಾಗಿದ್ದು ನಾನು ಶಾಸಕನಾಗಿರುವವ ತನಕ ಈ ಹಳೆಯ ಮಾರುಕಟ್ಟೆ ಸ್ಥಳಾಂತರಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿದ್ದಾರೆ.
ಅವರು ಬುಧವಾರ ಇಲ್ಲಿನ ಹಳೆಯ ಮೀನುಮಾರುಕಟ್ಟೆಯಲ್ಲಿ ಸೇರಿದ ಮೀನುಮಾರಾಟಗಾರ ಮಹಿಳೆಯರನ್ನುದ್ದೇಶಿಸಿ ಮಾತನಾಡಿದರು.
ಭಟ್ಕಳದಲ್ಲಿ ಇಂತಹ ಐದಾರು ಮೀನು ಮಾರುಕಟ್ಟೆ ಇದ್ದರೂ ಸ್ಥಳಾಭಾವ ಉಂಟಾಗುತ್ತದೆ. ಈ ಪರಿಸ್ಥಿತಿಯಲ್ಲಿ ಮಾರುಕಟ್ಟೆಯನ್ನು ಸ್ಥಳಾಂತರಿಸುವ ನಿರ್ಧಾರಕ್ಕೆ ಬಂದಿರುವುದು ಸರಿಯಲ್ಲ. ಇದಿರಂದಾಗಿ ಸಾರ್ವಜನಿಕರಿಗೆ ತೋಂದರೆಯಾಗುವುದಲ್ಲದೆ ಮೀನುಮಾರಾಟಗಾರರಿಗೂ ತೊಂದರೆಯಾಗುತ್ತದೆ. ಈಗಿರುವ ಕಟ್ಟಡವನ್ನು ದುರಸ್ತಿ ಮಾಡಿಕೊಡಿ. ನಿಮ್ಮಿಂದ ಆಗದಿದ್ದರೆ ನಾನೆ ಅದನ್ನು ದುರಸ್ತಿ ಮಾಡಿಕೊಡುತ್ತೇನೆ ಎಂದರು.
ಮತ್ಸ್ಯಕ್ಷಾಮದಿಂದಾಗಿ ಇಂದು ಮೀನುಗಾರರು ಅತ್ಯಂತ ಕಷ್ಟದಲ್ಲಿದ್ದಾರೆ. ಪುರಸಭೆ ತಕ್ಷಣ ತಮ್ಮ ಆದೇಶ ಹಿಂಪಡೆಯಬೇಕು. ಯಾವುದೇ ಕಾರಣಕ್ಕೂ ಮೀನುಗಾರರು ಈ ಹಳೆಯ ಮಾರುಕಟ್ಟೆಯನ್ನು ತೆರವುಗೊಳಿಸುವ ಅವಶ್ಯಕತೆಯಿಲ್ಲ ಎಂದರು.
ಹಲವು ವರ್ಷಗಳಿಂದಲೂ ಸಂತೆ ಮಾರುಕಟ್ಟೆಯಲ್ಲಿ ನಿರ್ಮಿಸಿರುವ ಸುಸಜ್ಜಿತ ಮೀನುಮಾರುಕಟ್ಟೆಗೆ ಪುರಸಭೆಯ ಹಳೆ ಮೀನುಮಾರುಕಟ್ಟೆ ಸ್ಥಳಾಂತರಿಸುವ ಪ್ರಸ್ತಾಪವಿದ್ದು, ಈಗ ಎಪ್ರಿಲ್ ಒಂದರಿಂದ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ಪುರಸಭೆ ನಿರ್ಣಯಕೈಗೊಂಡಿತ್ತು.
ಇದಕ್ಕೆ ಮೀನುಮಾರಾಟಗಾರರ ಹಾಗೂ ಮಾರುಕಟ್ಟೆ ಬಳಿ ಇರುವ ಅಂಗಡಿ ಮಾಲಕರು ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಸಭೆ ನಡೆಸಿದ ಸಹಾಯಕ ಆಯುಕ್ತೆ ಮಮತಾದೇವಿ ಸಧ್ಯಕ್ಕೆ ಹಳೆಯ ಮೀನುಮಾರುಕಟ್ಟೆಯಲ್ಲಿ ಮಾರಾಟ ಮುಂದುವರೆಸಲಿ ಎಂಬ ನಿರ್ಣಯವನ್ನು ಕೈಗೊಂಡಿದ್ದರು.