ಕಸಾಪ ಚುನಾವಣೆ: ಉಡುಪಿ ಜಿಲ್ಲೆಯಲ್ಲಿ 1987 ಮತದಾರರು
ಉಡುಪಿ, ಎ.1: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 1987 ಮಂದಿ ಮತದಾರರಿದ್ದು, ಮೇ 9ರಂದು ಜಿಲ್ಲೆಯ ಒಟ್ಟು 8 ಕೇಂದ್ರಗಳಲ್ಲಿ ಮತದಾನ ನಡೆಯಲಿದೆ.
ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಜೊತೆಗೆ ಉಡುಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೂ ಚುನಾವಣೆ ನಡೆಯಲಿದ್ದು, ಈಗಾಗಲೇ ಸುಬ್ರಹ್ಮಣ್ಯ ಬಾಸ್ರಿ, ಪ್ರಸ್ತುತ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಗೂ ಡಾ.ಸುಬ್ರಹ್ಮಣ್ಯ ಭಟ್ ನಾಮಪತ್ರ ಸಲ್ಲಿಸಿದ್ದಾರೆ. ಎ.7ರಂದು ಸಂಜೆ 5 ಗಂಟೆಗೆ ನಾಮಪತ್ರ ಸ್ವೀಕಾರಕ್ಕೆ ಕೊನೆಯ ದಿನ ವಾಗಿದೆ. ಎ.8ರಂದು ಬೆಳಗ್ಗೆ 11 ಗಂಟೆಗೆ ನಾಮಪತ್ರಗಳ ಪರಿಶೀಲನೆ, ಎ.12ರಂದು ಮಧ್ಯಾಹ್ನ 3 ಗಂಟೆ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಅಂದು ಮಧ್ಯಾಹ್ನ 3 ಗಂಟೆಯ ನಂತರ ಅಭ್ಯರ್ಥಿಗಳ ಅಂತಿಮ ಟ್ಟಿ ಪ್ರಕಟ ಮಾಡಲಾಗುತ್ತದೆ.
ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 8 ಮತಗಟ್ಟೆಯನ್ನು ತೆರೆಯಲಾಗಿದೆ. ಉಡುಪಿ ತಾಲೂಕು ಕಚೇರಿ, ಕಾರ್ಕಳ ಮಿನಿ ವಿಧಾನ ಸೌಧ ತಾಲೂಕು ಕಚೇರಿ, ಕುಂದಾಪುರ ಮಿನಿ ವಿಧಾನಸೌಧ ತಾಲೂಕು ಕಚೇರಿ, ಬ್ರಹ್ಮಾವರ ತಾಲೂಕು ಕಚೇರಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಕಚೇರಿ ಕೋಟ, ಕಾಪು ತಾಲೂಕು ಕಚೇರಿ ಕಟ್ಟಡ, ಬೈಂದೂರು ತಾಲೂಕು ಕಚೇರಿ, ಹೆಬ್ರಿ ತಾಲೂಕು ಕಚೇರಿಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಉಡುಪಿ ತಹಶೀಲ್ದಾರ ಪ್ರದೀಪ್ ಎಸ್.ಕುರ್ಡೇಕರ್ ತಿಳಿಸಿದ್ದಾರೆ.