ಕುಲಪತಿ ಹುದ್ದೆ ಕೊಡಿಸುವುದಾಗಿ ವಂಚಿಸಿದ ಪ್ರಕರಣ: ಪ್ರಸಾದ್ ಅತ್ತಾವರನಿಗೆ ನ್ಯಾಯಾಂಗ ಬಂಧನ
ಮಂಗಳೂರು, ಎ.1: ರಾಯಚೂರು ವಿಶ್ವವಿದ್ಯಾನಿಲಯದ ಕುಲಪತಿ ಹುದ್ದೆ ಕೊಡಿಸುವುದಾಗಿ ಹೇಳಿ ಮಂಗಳೂರು ವಿವಿಯ ಪ್ರಾಧ್ಯಾಪಕ ಡಾ.ಜೈಶಂಕರ್ ಅವರಿಂದ ಹಣ ಪಡೆದು ವಂಚಿಸಿದ್ದಲ್ಲದೆ ಜೀವ ಬೆದರಿಕೆ ಹಾಕಿದ ಪ್ರಮುಖ ಆರೋಪಿ ರಾಮಸೇನೆಯ ಪ್ರಸಾದ್ ಅತ್ತಾವರನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿ ಪ್ರಸಾದ್ ಅತ್ತಾವರನನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದ ಪೊಲೀಸರು ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ದಿದ್ದರು. ವಿಚಾರಣೆ ಮುಗಿಸಿದ ಬಳಿಕ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗೆ ಎರಡು ವಾರಗಳ ನ್ಯಾಯಾಂಗ ಬಂಧನವಾಗಿದೆ.
ಪ್ರಸಾದ್ ಅತ್ತಾವರನು ಮಂಗಳೂರು ವಿವಿಯ ಪ್ರಾಧ್ಯಾಪಕ ಡಾ.ಜೈಶಂಕರ್ ಅವರಿಂದ ರಾಯಚೂರು ವಿವಿಯ ಕುಲಪತಿ ಹುದ್ದೆ ಕೊಡಿಸುವುದಾಗಿ ಹೇಳಿ 17.50 ಲಕ್ಷ ರೂ. ಪಡೆದು ವಂಚಿಸಿದ್ದ. ಬಳಿಕ ಹುದ್ದೆಯನ್ನೂ ಕೊಡಿಸದೆ, ಹಣವನ್ನೂ ಮರಳಿಸದೆ ಜೀವ ಬೆದರಿಕೆ ಹಾಕಿದ್ದ. ಈ ಬಗ್ಗೆ ಡಾ.ಜೈಶಂಕರ್ ನೀಡಿದ್ದ ದೂರಿನಂತೆ ಕಂಕನಾಡಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಪ್ರಾಧ್ಯಾಪಕ ಜೈಶಂಖರ್ ಮತ್ತು ಪ್ರಸಾದ್ ಅತ್ತಾವರನ ನಡುವೆ ಮಧ್ಯಸ್ಥಿಕೆ ವಹಿಸಿದ್ದ ವಿವೇಕ್ ಆಚಾರ್ಯ, ಗೋಪಾಲಕೃಷ್ಣ, ಭರತ್, ಮಂಜು ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ನಾಲ್ವರ ಬಂಧನಕ್ಕಾಗಿ ಶೋಧ ಮುಂದುವರಿಸಿದ್ದಾರೆ.