×
Ad

ರಾಜ್ಯ ಹೆದ್ದಾರಿಯಲ್ಲಿ ಟೋಲ್: ವಾಹನ ಸರ್ವೇ; ಸ್ಥಳೀಯರಿಂದ ವಿರೋಧ

Update: 2021-04-01 20:34 IST

ಪಡುಬಿದ್ರಿ: ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಟೋಲ್ ನಿರ್ಮಿಸುವ ಉದ್ದೇಶದಿಂದ ವಾಹನಗಳ ಸರ್ವೇ ನಡೆಸುತ್ತಿರುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ತಡೆಹಿಡಿದ ಘಟನೆ ಗುರುವಾರ ಕಂಚಿನಡ್ಕದಲ್ಲಿ ನಡೆದಿದೆ.

ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಬೆಳ್ಮಣ್‍ನಲ್ಲಿ ಟೋಲ್‍ಗೇಟ್ ನಿರ್ಮಿಸಲು ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಮುಂದಾಗಿತ್ತು. ಈ ವೇಳೆ ಬೆಳ್ಮಣ್ ನಾಗರೀಕರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಬಳಿಕ ಟೋಲ್‍ಗೇಟ್ ವಿಚಾರ ನೆನಗುದಿಗೆ ಬಿದ್ದಿತ್ತು. 

ಇದೀಗ ಪಡುಬಿದ್ರಿ-ಕಾರ್ಕಳ ರಸ್ತೆಯ ಪಡುಬಿದ್ರಿಯ ಕಂಚಿನಡ್ಕದಲ್ಲಿ ಟೋಲ್‍ಗೇಟ್ ಅಳವಡಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಕಳೆದ ಒಂದು ವಾರಗಳಿಂದ ನಂದಿಕೂರು, ಕಂಚಿನಡ್ಕ ಪರಿಸರದಲ್ಲಿ ವಾಹನಗಳ ಗಣತಿ ನಡೆಸಲಾಗುತಿತ್ತು. ಗುರುವಾರ ಸಂಜೆ ಕಂಚಿನಡ್ಕದಲ್ಲಿ ವಾಹನ ಗಣತಿ ನಡೆಸುತಿದ್ದ ವೇಳೆ ಸ್ಥಳೀಯರು ವಾಹನ ಸರ್ವೇ ನಡೆಸುತ್ತಿರುವ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ನವೀನ್ ಎನ್.ಶೆಟ್ಟಿ,. ಎಂ.ಎಸ್. ಶಫಿ, ಕರ್ನಾಟಕ ರಕ್ಷಣಾ ವೇದಿಕೆಯ ಕಾಪು ತಾಲ್ಲೂಕು ಅಧ್ಯಕ್ಷ ನಿಝಾಮುದ್ದೀನ್ ಹಾಗೂ ಸ್ಥಳೀಯರು ಅವರನ್ನು ವಿಚಾರಿಸಿದಾಗ ಟೋಲ್‍ಗೇಟ್ ನಿರ್ಮಿಸುವ ಉದ್ದೇಶದಿಂದ ವಾಹನಗಳ ಸರ್ವೇ ನಡೆಸುತ್ತಿರುವುದಾಗಿ ಹೇಳಿದರು. 

ಆಕ್ರೋಶಿತರಾದ ಸ್ಥಳೀಯರು ಸರ್ವೇ ನಡೆಸುವವರನ್ನು ತರಾಟೆಗೆ ತೆಗೆದುಕೊಂಡು ಸರ್ವೇ ನಿಲ್ಲಿಸುವಂತೆ ಸೂಚಿಸಿ ಸರ್ವೇಗೆ ತಡೆಹಿಡಿದರು. ಇದೀಗ ಪಡುಬಿದ್ರಿಯ ಕಂಚಿನಡ್ಕದಲ್ಲಿ ಟೋಲ್ ನಿರ್ಮಿಸಲು ಮುಂದಾಗಿದ್ದು, ಆರಂಭದಲ್ಲೇ ಭಾರೀ ವಿರೋಧ ವ್ಯಕ್ತವಾಗಿದೆ.

ರಾಷ್ಟ್ರೀಯ ಹೆದ್ದಾರಿಯ ಹೆಜಮಾಡಿಯಲ್ಲಿ ಈಗಾಗಲೇ ಟೋಲ್ ಭರೆ ಉಂಟಾಗಿದ್ದು, ಇದರ ಮಧ್ಯೆ ಮತ್ತೆ ಕಂಚಿನಡ್ಕದಲ್ಲಿ ಟೋಲ್ ನಿರ್ಮಿಸಲು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾಪು ತಾಲ್ಲೂಕು ಘಟಕದ ಅಧ್ಯಕ್ಷ ನಿಝಾಮುದ್ದೀನ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News