×
Ad

ಮಂಗಳೂರು: ಕ್ರೈಸ್ತರಿಂದ ಪವಿತ್ರ ಗುರುವಾರ ಆಚರಣೆ

Update: 2021-04-01 23:12 IST

ಮಂಗಳೂರು, ಎ.1: ‘ಪವಿತ್ರ ಗುರುವಾರ’ವನ್ನು ಇಂದು ಆಚರಿಸಿದ ಕ್ರೈಸ್ತರು ಏಸು ಕ್ರಿಸ್ತರ ಕೊನೆಯ ಭೋಜನದ ದಿನವನ್ನು ಸ್ಮರಿಸಿದರು. ಆ ಹಿನ್ನಲೆಯಲ್ಲಿ ಚರ್ಚ್ ಮತ್ತಿತರ ಕ್ರೈಸ್ತ ಪ್ರಾರ್ಥನಾ ಕ್ಷೇತ್ರಗಳಲ್ಲಿ ಗುರುವಾರ ಸಂಜೆ ಬಲಿಪೂಜೆ ಮತ್ತು ವಿಶೇಷ ಪ್ರಾರ್ಥನೆಗಳು ಜರುಗಿದವು. ಕೊರೋನ ನಿಯಮಗಳನ್ನು ಪಾಲಿಸಿ ಸರಳವಾಗಿ ಕಾರ್ಯಕ್ರಮ ನಡೆಸಲಾಯಿತು.

ನಗರದ ರೊಜಾರಿಯೋ ಕೆಥೆಡ್ರಲ್‌ನಲ್ಲಿ ಬಿಷಪ್ ಅತಿ ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಬಲಿ ಪೂಜೆಯ ನೇತೃತ್ವ ವಹಿಸಿದ್ದರು. ಕೆಥೆಡ್ರಲ್‌ನ ರೆಕ್ಟರ್ ವಂ. ಆಲ್ಫ್ರೆಡ್ ಜೆ. ಪಿಂಟೊ ಮತ್ತಿತರ ಗುರುಗಳು ಪಾಲ್ಗೊಂಡಿದ್ದರು.

ಏಸು ಕ್ರಿಸ್ತರು ತನ್ನ ಕೊನೆಯ ಭೋಜನದ ಸಂದರ್ಭ 12 ಮಂದಿಯ ಶಿಷ್ಯರ ಪಾದ ತೊಳೆದು ಸೇವೆಯ ಸಂಸ್ಕಾರವನ್ನು ಪ್ರತಿಪಾದಿಸಿದ್ದರು. ಅದರ ಸಂಕೇತವಾಗಿ ಕೆಥೆಡ್ರಲ್‌ನಲ್ಲಿ ಬಿಷಪ್ ಹಾಗೂ ಇತರ ಚರ್ಚ್‌ಗಳಲ್ಲಿ ಸ್ಧಳೀಯ ಧರ್ಮಗುರುಗಳು 12 ಮಂದಿ ಕ್ರೈಸ್ತರ ಪಾದಗಳನ್ನು ತೊಳೆದರು. ಈ ಪೈಕಿ 6 ಮಹಿಳೆಯರಿದ್ದರು. ಅಲ್ಲದೆ ಯುವಜನರಿಗೆ, ವಯಸ್ಕರಿಗೆ, ರೋಗಿಗಳಿಗೆ ಹಾಗೂ ಧಾರ್ಮಿಕ ವ್ಯಕ್ತಿಗಳಿಗೂ ಪ್ರಾತಿನಿಧ್ಯ ನೀಡಲಾಗಿತ್ತು.

ಕೊನೆಯ ಭೋಜನದ ಸಂದರ್ಭ ಏಸು ಕ್ರಿಸ್ತರು ಪರಮ ಪ್ರಸಾದದ ಸಂಸ್ಕಾರ ಹಾಗೂ ಧರ್ಮಗುರುಗಳ ದೀಕ್ಷಾ ಸಂಸ್ಕಾರವನ್ನೂ ಪ್ರಾರಂಭಿಸಿದ್ದ ಕಾರಣ ಈ ಎರಡು ಸಂಸ್ಕಾರಗಳ ಸ್ಮರಣೆಯನ್ನೂ ಮಾಡಲಾಯಿತು.

ಈ ಸಂದರ್ಭ ಉಪನ್ಯಾಸ ನೀಡಿದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಕೊರೋನದಿಂದ ತತ್ತರಿಸುತ್ತಿರುವಾಗ ಈ ಪವಿತ್ರ ಗುರುವಾರ ಆಚರಿಸಲಾಗಿದ್ದು, ಕೊರೋನ ರೋಗ ಆದಷ್ಟು ಶೀಘ್ರ ನಮ್ಮಿಂದ ದೂರವಾಗಲಿ ಎಂದು ಪ್ರಾರ್ಥಿಸಿದರು.

ಪವಿತ್ರ ಗುರುವಾರದಂದು ಮೂರು ವಿಷಯಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಪ್ರಥಮವಾಗಿ ಏಸು ಕ್ರಿಸ್ತರು ಪರಮ ಪ್ರಸಾದದ ಸಂಸ್ಕಾರವನ್ನು ಈ ದಿನದಂದು ಆರಂಭಿಸಿದರು ಹಾಗೂ ಅದನ್ನು ಪುನರಪಿ ನಡೆಸುವಂತೆ ಸೂಚಿಸಿದರು. ಅದರ ಪ್ರಕಾರ ಪ್ರತಿ ಪವಿತ್ರ ಬಲಿ ಪೂಜೆಯಲ್ಲಿ ಇದನ್ನು ನಡೆಸಲಾಗುತ್ತದೆ. ಜತೆಗೆ ಗುರುದೀಕ್ಷೆಯ ಸಂಸ್ಕಾರವನ್ನು ಕೂಡ ಏಸು ಕ್ರಿಸ್ತರು ಈ ದಿನದಂದು ನೆರವೇರಿಸಿದ್ದರು.

ಎರಡನೇಯದಾಗಿ ತನ್ನ 12 ಮಂದಿ ಶಿಷ್ಯರ ಪಾದ ತೊಳೆದು ಸೇವೆಯ ಸಂಸ್ಕಾರಕ್ಕೆ ನಾಂದಿ ಹಾಡಿದರು. ಮೂರನೆಯದಾಗಿ ‘ನಾನು ನಿಮ್ಮನ್ನು ಪ್ರೀತಿಸಿದಂತೆ ನೀವು ಪರಸ್ಪರ ಪ್ರೀತಿಸಬೇಕು’ ಎಂಬ ಹೊಸ ಉಪದೇಶವನ್ನು ಅಂದು ನೀಡಿದ್ದರು. ಇದು ಭ್ರಾತೃತ್ವದ ಭಾವನೆಯ ಸಂಕೇತವಾಗಿದೆ ಎಂದು ಬಿಷಪ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News