ಆರ್‌ಸಿಬಿ ತಂಡವನ್ನು ಸೇರಿಕೊಳ್ಳಲು ಚೆನ್ನೈ ತಲುಪಿದ ವಿರಾಟ್ ಕೊಹ್ಲಿ
ಚೆನ್ನೈ: ಟೀಮ್ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಗುರುವಾರ ತನ್ನ ಐಪಿಎಲ್ ತಂಡವನ್ನು ಸೇರಿಕೊಂಡಿದ್ದು, ಏಳು ದಿನಗಳ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ.
ಎಪ್ರಿಲ್ 9ರಿಂದ ಆರಂಭ ವಾಗಲಿರುವ ಮುಂಬರುವ ಐಪಿಎಲ್ ಋತುವಿಗೆ ಆರ್‌ಸಿಬಿ ಈಗಾಗಲೇ ತರಬೇತಿ ಶಿಬಿರವನ್ನು ಆರಂಭಿಸಿದೆ.
‘‘ನಾಯಕ ವಿರಾಟ್ ಕೊಹ್ಲಿ ಚೆನ್ನೈಗೆ ಆಗಮಿಸಿದ್ದಾರೆ’’ ಎಂದು ಮಾಸ್ಕ್ ಧರಿಸಿದ್ದ ಕೊಹ್ಲಿಯ ಚಿತ್ರದೊಂದಿಗೆ ಆರ್‌ಸಿಬಿ ಟ್ವೀಟಿಸಿದೆ.
ಎಪ್ರಿಲ್ 9ರಂದು ಚೆನ್ನೈನಲ್ಲಿ ಆರಂಭವಾಗಲಿರುವ ಈ ವರ್ಷದ ಐಪಿಎಲ್ ಟೂರ್ನಮೆಂಟ್‌ನ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಕೊಹ್ಲಿ ಅವರು 2008ರಲ್ಲಿ ಐಪಿಎಲ್ ಪ್ರಾರಂಭವಾದಾಗಿನಿಂದ ಆರ್‌ಸಿಬಿ ತಂಡದಲ್ಲೇ ಇದ್ದಾರೆ. ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧ ಸೋಮವಾರ ಭಾರತವು ಏಕದಿನ ಸರಣಿಯನ್ನು ಜಯಿಸಿದ ಬಳಿಕ ಕೊಹ್ಲಿ ಅವರು ಸುರಕ್ಷಿತ ಅಂತರ ನಿಯಮ ಪಾಲಿಸುವುದನ್ನು ತ್ಯಜಿಸಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿಗಿಂತ ಮೊದಲೇ ಜನವರಿ ಅಂತ್ಯದಿಂದ ಕೊಹ್ಲಿ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ಆರಂಭಿಸಿದ್ದರು. ಆರ್‌ಸಿಬಿಯ ಇನ್ನೋರ್ವ ಪ್ರಮುಖ ಆಟಗಾರ ಹಾಗೂ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್‌ಮನ್ ಎ.ಬಿ.ಡಿ ವಿಲಿಯರ್ಸ್ ಗುರುವಾರದಿಂದ ಆರ್‌ಸಿಬಿಯ ಸುರಕ್ಷಿತ ಅಂತರದ ನಿಯಮವನ್ನು ಪಾಲಿಸುತ್ತಿದ್ದಾರೆ.
37ರ ವಯಸ್ಸಿನ ಎಡಿಬಿ 2011ರಲ್ಲಿ ಆರ್‌ಸಿಬಿಯನ್ನು ಸೇರಿದ ಬಳಿಕ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಆರ್‌ಸಿಬಿ ತಂಡ ಮತ್ತೊಂದು ತರಬೇತಿಯಲ್ಲಿ ತೊಡಗಿಸಿಕೊಂಡಿದ್ದು, ಮುಖ್ಯ ಕೋಚ್ ಸಿಮೊನ್ ಕಟಿಚ್ ವೇಗದ ಬೌಲರ್ ನವದೀಪ್ ಸೈನಿ ಜೊತೆಗೂಡಿ ಕ್ವಾರಂಟೈನ್‌ನಿಂದ ಹೊರಬಂದಿದ್ದಾರೆ.