×
Ad

ಐಪಿಎಲ್ ಟೂರ್ನಿಯಿಂದ ಹೊರಗುಳಿದ ಜೋಶ್ ಹೇಝಲ್‌ವುಡ್

Update: 2021-04-02 00:24 IST

ಮೆಲ್ಬೋರ್ನ್: ಆಸ್ಟ್ರೇಲಿಯ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ಜೋಶ್ ಹೇಝಲ್‌ವುಡ್ ಮುಂಬರುವ 14ನೇ ಆವೃತ್ತಿಯ ಐಪಿಎಲ್‌ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಕ್ರಿಕೆಟ್‌ನಿಂದ ಸಣ್ಣ ವಿರಾಮ ಪಡೆಯಲು ಬಯಸಿರುವ ಅವರು ಈ ವರ್ಷಾಂತ್ಯದಲ್ಲಿ ನಡೆಯಲಿರುವ ಆ್ಯಶಸ್ ಸರಣಿ ಹಾಗೂ ಟ್ವೆಂಟಿ-20 ವಿಶ್ವಕಪ್‌ಗೆ ಸಜ್ಜಾಗಲು ನಿರ್ಧರಿಸಿದ್ದಾರೆ.

ಹೇಝಲ್‌ವುಡ್ ಅವರು ಐಪಿಎಲ್‌ನಲ್ಲಿ ಭಾಗವಹಿಸಲಿರುವ ಇತರ ಆಟಗಾರರೊಂದಿಗೆ ಆಸ್ಟ್ರೇಲಿಯದಿಂದ ನಿರ್ಗಮಿಸಿ ಚೆನ್ನೈ ತಂಡವನ್ನು ಸೇರಿ ಕೊಂಡಿದ್ದರು. ಆದರೆ, ಇದೀಗ ಅತ್ಯಂತ ಶ್ರೀಮಂತ ಲೀಗ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಮುಂದಿನ ಎರಡು ತಿಂಗಳು ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ. ಈ ವರ್ಷದ ಐಪಿಎಲ್ ಟೂರ್ನಿಯು ಎಪ್ರಿಲ್ 9ರಿಂದ ಆರಂಭವಾಗಿ ಮೇ 30ರ ತನಕ ನಡೆಯಲಿದೆ.

30ರ ವಯಸ್ಸಿನ ಹೇಝಲ್‌ವುಡ್ ಕಳೆದ ಋತುವಿನಲ್ಲಿ ಸಿಎಸ್‌ಕೆ ಪರವಾಗಿ 3 ಪಂದ್ಯಗಳಲ್ಲಿ ಆಡಿದ್ದರು. 2020ರ ಆವೃತ್ತಿಯ ಐಪಿಎಲ್ ಯುಎಇನಲ್ಲಿ ನಡೆದಿತ್ತು.

ನಾನು ಕಳೆದ 10 ತಿಂಗಳುಗಳಿಂದ ವಿವಿಧ ಸಮಯದಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡಿದ್ದು ಕ್ವಾರಂಟೈನ್‌ಗೆ ಒಳಗಾಗಿದ್ದೆ. ಇದೀಗ ನಾನು ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದೇನೆ. ಮುಂದಿನ ಎರಡು ತಿಂಗಳು ಆಸ್ಟ್ರೇಲಿಯದಲ್ಲಿರುವ ಮನೆಯಲ್ಲಿ ಸಮಯ ಕಳೆಯಲು ಬಯಸಿದ್ದೇನೆ ಎಂದು ಹೇಝಲ್‌ವುಡ್ ಹೇಳಿದ್ದಾರೆ.

ಬಲಗೈ ವೇಗದ ಬೌಲರ್ ಹೇಝಲ್‌ವುಡ್ ಐಪಿಎಲ್‌ನಿಂದ ಹಿಂದೆ ಸರಿಯುವುದರೊಂದಿಗೆ ತಮ್ಮದೇ ದೇಶದ ಜೋಶ್ ಫಿಲಿಪ್(ಆರ್‌ಸಿಬಿ)ಹಾಗೂ ಮಿಚೆಲ್ ಮಾರ್ಷ್(ಸನ್‌ರೈಸರ್ಸ್ ಹೈದರಾಬಾದ್)ಹೆಜ್ಜೆಯನ್ನು ಅನುಸರಿಸಿದ್ದಾರೆ. ಆಸ್ಟ್ರೇಲಿಯದ ಇನ್ನು ಕೆಲವು ಆಟಗಾರರು ಟೂರ್ನಿಯಿಂದ ಹೊರಗುಳಿಯಲು ಚಿಂತಿಸುತ್ತಿದ್ದಾರೆ ಎಂದು ವರದಿಯಾಗಿದೆ.

 ಆಸ್ಟ್ರೇಲಿಯದ ಸೀಮಿತ ಓವರ್ ತಂಡದೊಂದಿಗೆ ಇಂಗ್ಲೆಂಡ್‌ಗೆ ತೆರಳುವ ಮೊದಲು ಹೇಝಲ್‌ವುಡ್ ಕಳೆದ ವರ್ಷದ ಜುಲೈನಿಂದ ನಿರ್ಬಂಧದಡಿ ಇದ್ದಾರೆ. ಯುಎಇನಲ್ಲಿ ಐಪಿಎಲ್ ಆಡಲು ತೆರಳುವ ಮೊದಲು ಕಟ್ಟುನಿಟ್ಟಿನ ಸುರಕ್ಷಿತ ಅಂತರ ಕಾಯ್ದುಕೊಂಡಿದ್ದರು. ಮತ್ತೊಮ್ಮೆ ಕಠಿಣ ಶಿಷ್ಟಾಚಾರಗಳನ್ನು ಪಾಲಿಸಿದ್ದರು.

ನವೆಂಬರ್‌ನಲ್ಲಿ ಆಸ್ಟ್ರೇಲಿಯಕ್ಕೆ ವಾಪಸಾಗಿದ್ದ ಹೇಝಲ್‌ವುಡ್ ಅಡಿಲೇಡ್ ಹೊಟೇಲ್‌ನಲ್ಲಿ 2 ವಾರಗಳ ಕಾಲ ಪ್ರತ್ಯೇಕವಾಗಿದ್ದರು. ಆ ನಂತರ ಭಾರತ ವಿರುದ್ಧ ಟೆಸ್ಟ್ ಸರಣಿಯನ್ನಾಡಲು ಆಸ್ಟ್ರೇಲಿಯ ತಂಡವನ್ನು ಸೇರಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News