×
Ad

ಮಂಗಳೂರು: ಬಸ್ ತಡೆದು ಯುವಕನಿಗೆ ಸಂಘಪರಿವಾರದ ಕಾರ್ಯಕರ್ತರಿಂದ ಹಲ್ಲೆ

Update: 2021-04-02 08:57 IST

ಮಂಗಳೂರು, ಎ.2: ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನಿಗೆ ಸಂಘ ಪರಿವಾರದ ಕಾರ್ಯಕರ್ತರು ಎನ್ನಲಾದ ತಂಡವೊಂದು ಹಲ್ಲೆ ನಡೆಸಿದ ಘಟನೆ ಗುರುವಾರ ರಾತ್ರಿ ನಗರದ ಪಂಪ್‌ವೆಲ್ ಬಳಿ ನಡೆದಿದೆ.

ಹಲ್ಲೆಗೊಳಗಾದ ಯುವಕನನ್ನು ಬೈಕಂಪಾಡಿ -ಜೋಕಟ್ಟೆ ಪರಿಸರ ನಿವಾಸಿ ಅಸ್ವಿದ್ ಅನ್ವರ್ ಮುಹಮ್ಮದ್ (24) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ಈ ಯುವಕ ಪ್ರಯಾಣಿಸುತ್ತಿದ್ದ. ರಾತ್ರಿ ಸುಮಾರು 9:30ಕ್ಕೆ ಬಸ್ಸನ್ನು ತಡೆದು ನಿಲ್ಲಿಸಿದ‌ ನಾಲ್ಕೈದು ಮಂದಿಯ ತಂಡ ಯುವಕನನ್ನು ಬಸ್ಸಿನಿಂದ ಹೊರಗೆಳೆದು ಹಲ್ಲೆ ನಡೆಸಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಹಲ್ಲೆಗೊಳಗಾದ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.‌ ಯುವಕನ ಜೊತೆ ಯುವತಿಯೊಬ್ಬಳಿದ್ದು, ಆಕೆಯನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ.  ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನೈತಿಕತೆಯ ಹೆಸರಿನಲ್ಲಿ ದುಷ್ಕರ್ಮಿಗಳು ಕಾನೂನು ಕೈಗೆತ್ತಿಕೊಂಡ ಆರೋಪ ಕೇಳಿ ಬಂದಿದೆ.

ಒಂದು ವಾರದಲ್ಲಿ ಜಿಲ್ಲೆಯ‌ ಸುರತ್ಕಲ್, ಬೆಳ್ತಂಗಡಿ, ಪಂಪ್‌ವೆಲ್ ಬಳಿ ದುಷ್ಕರ್ಮಿಗಳು ಅಟ್ಟಹಾಸ ಮೆರೆಯುತ್ತಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಆರೋಪಿಗಳ ಬಂಧನಕ್ಕೆ ಕ್ರಮ: ಪೊಲೀಸ್ ಕಮಿಷನರ್

ಯುವಕನೋರ್ವನ ಮೇಲೆ ನಗರದ ಪಂಪ್ ವೆಲ್ ಬಳಿ ಹಲ್ಲೆ ನಡೆದಿದ್ದು, ಹಲ್ಲೆಗೊಳಗಾದ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗಿದ್ದ ಯುವತಿಯನ್ನು ಮನೆಗೆ ಕಳುಹಿಸಲಾಗಿದೆ. ಹಲ್ಲೆಗೆ ಸಂಬಂಧಿಸಿ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕಾಗಿ ಡಿಸಿಪಿ ಮತ್ತು ಎಸಿಪಿ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್‍ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News