ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ ನೀಡಿದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2021-04-02 18:55 GMT
photo: Twitter

 ಲಕ್ನೊ, ಎ.2: ಕಳೆದ ತಿಂಗಳು ಉತ್ಕಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕೇರಳದ ಇಬ್ಬರು ಕೈಸ್ತ ಸನ್ಯಾಸಿನಿಯರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

2021ರ ಮಾರ್ಚ್ 19ರಂದು ಝಾನ್ಸಿ ರೈಲು ನಿಲ್ದಾಣದಲ್ಲಿ ಕೇರಳದ ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ ನೀಡಿ ಅವರನ್ನು ಬಲವಂತವಾಗಿ ರೈಲಿನಿಂದ ಕೆಳಗಿಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಆಂಚಲ್ ಅರ್ಜಾರಿಯಾ ಮತ್ತು ಪುರ್ಗೇಶ್ ಅಮಾರಿಯಾ ಎಂಬವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಂಧನ ಕಾರ್ಯಾಚರಣೆ ಮುಂದುವರಿದಿದೆ ಎಂದು ಝಾನ್ಸಿ ಜಿಲ್ಲಾಡಳಿತ ಹೇಳಿದೆ. ಗುರುವಾರ ರಾತ್ರಿ 10 ಗಂಟೆ ವೇಳೆಗೆ ಝಾನ್ಸಿ ರೈಲು ನಿಲ್ದಾಣದಲ್ಲಿ ರೈಲ್ವೇ ಪೊಲೀಸ್ ತಂಡ ಗಸ್ತು ತಿರುಗುತ್ತಿದ್ದಾಗ , ಸಮೀಪದಲ್ಲಿ ಇಬ್ಬರು ವ್ಯಕ್ತಿಗಳು ಕ್ರೈಸ್ತ ಸನ್ಯಾಸಿನಿಯರ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂಬ ಮಾಹಿತಿ ದೊರೆತಿದೆ. ಅದರಂತೆ ಆ ವ್ಯಕ್ತಿಗಳನ್ನು ವಿಚಾರಿಸಿದಾಗ ‘ಕ್ರೈಸ್ತ ಸನ್ಯಾಸಿನಿಯರ ಪ್ರಕರಣದಲ್ಲಿ ಪೊಲೀಸರು ಸೂಕ್ತವಾಗಿ ಕಾರ್ಯ ನಿರ್ವಹಿಸಿಲ್ಲ. ಯಾವುದೇ ಪ್ರಕರಣ ದಾಖಲಿಸದೆ ಅವರನ್ನು ಹೋಗಲು ಬಿಟ್ಟಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ’ ಎಂದು ಉತ್ತರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ಮತ್ತು ಎಫ್‌ಐಆರ್ ದಾಖಲಿಸಿ ಇಬ್ಬರನ್ನೂ ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಝಾನ್ಸಿಯ ಬಲಪಂಥೀಯ ಗುಂಪಿನ ಸದಸ್ಯರಾಗಿದ್ದಾರೆ ಎಂದು ವರದಿ ಹೇಳಿದೆ. ಎಬಿವಿಪಿ ಮತ್ತು ಇತರ ಬಲಪಂಥೀಯ ಗುಂಪಿನವರು ಮಾರ್ಚ್ 19ರಂದು ಝಾನ್ಸಿ ನಿಲ್ದಾಣದಲ್ಲಿ ಕ್ರೈಸ್ತ ಸನ್ಯಾಸಿನಿಯರು ಹಾಗೂ ಅರೊಂದಿಗೆ ಇದ್ದ ಇಬ್ಬರು ಯುವತಿಯರನ್ನು ಬಲವಂತವಾಗಿ ಕೆಳಗಿಳಿಸಿ ಅವರನ್ನು ಪ್ರಶ್ನಿಸುವ ಮೂಲಕ ಕಿರುಕುಳ ನೀಡಿದ್ದರು. ಮತಾಂತರ ನಡೆಸಲು ಯುವತಿಯರನ್ನು ಕರೆದೊಯ್ಯಲಾಗುತ್ತಿದೆ ಎಂಬ ಶಂಕೆಯ ಮೇಲೆ ಅವರನ್ನು ಪ್ರಶ್ನಿಸಲಾಗಿತ್ತು. ಬಳಿಕ ರೈಲು ನಿಲ್ದಾಣದಲ್ಲಿ ಅಧಿಕಾರಿಗಳು ನಡೆಸಿದ ವಿಚಾರಣೆಯಲ್ಲಿ ಈ ಶಂಕೆ ಆಧಾರರಹಿತ ಎಂಬುದು ದೃಢಪಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News