ಕೇವಲ ಒಂದು ಸಿಕ್ಸರ್ ನಿಂದ ನಾವು 2011ರ ವಿಶ್ವಕಪ್ ಗೆದ್ದಿಲ್ಲ:ಗೌತಮ್ ಗಂಭೀರ್
ಹೊಸದಿಲ್ಲಿ: ಭಾರತವು 2011ರಲ್ಲಿ ಎರಡನೇ ಬಾರಿ ಏಕದಿನ ವಿಶ್ವಕಪ್ ಗೆದ್ದುಕೊಂಡು ಈಗ 10 ವರ್ಷ ಕಳೆದಿದೆ. ವಿಶ್ವಕಪ್ ಫೈನಲ್ ನಲ್ಲಿ 97 ರನ್ ಗಳಿಸಿ ಅಗ್ರ ಸ್ಕೋರರ್ ಆಗಿದ್ದ ಗೌತಮ್ ಗಂಭೀರ್ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ 10ನೇ ವರ್ಷದ ಸಂಭ್ರಮದಲ್ಲಿರುವಾಗ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ವಿಶ್ವಕಪ್ ಗೆಲ್ಲುವಲ್ಲಿ ತಂಡದ ಸಂಘಟಿತ ಕಾರ್ಯ ಹೇಗೆ ನಿರ್ಣಾಯಕ ಪಾತ್ರವಹಿಸಿತ್ತು ಎನ್ನುವುದನ್ನು ಒತ್ತಿ ಹೇಳಿದ್ದಾರೆ.
ನಾಯಕ ಎಂಎಸ್ ಧೋನಿ ಸಿಡಿಸಿರುವ ಸಿಕ್ಸರ್ ನೆರವಿನಿಂದಲೇ ಭಾರತವು 2011ರ ವಿಶ್ವಕಪ್ ಜಯಿಸಿತ್ತು ಎನ್ನುವ ರೀತಿಯಲ್ಲಿ ಬಣ್ಣಿಸಿದ್ದ ವೆಬ್‍ಸೈಟ್ ಅನ್ನು ಗೌತಮ್ ಗಂಭೀರ್ ಕಳೆದ ವರ್ಷ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.
ಭಾರತವು 2011ರ ವಿಶ್ವಕಪ್ ಜಯಿಸಿ ಸರಿಯಾಗಿ 10 ವರ್ಷವಾಗಿದ್ದು, ಮುಂಬೈನಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗಂಭೀರ್ 97 ರನ್ ಗಳಿಸಿದ್ದರು. ಆಲ್ ರೌಂಡ್ ಪ್ರದರ್ಶನದ ಮೂಲಕ ಸರಣಿ ಶ್ರೇಷ್ಟ ಪ್ರಶಸ್ತಿ ಜಯಿಸಿದ್ದ ಯುವರಾಜ್ ಸಿಂಗ್ ಸಹಿತ ವಿಶ್ವಕಪ್ ಗೆಲುವಿನ ಹಿಂದೆ ಹಲವು ಹೀರೋಗಳಿದ್ದರು ಎಂದು ಆಂಗ್ಲ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ವಾಂಖೆಡೆ ಸ್ಟೇಡಿಯಂನಲ್ಲಿ ವಿಶ್ವಕಪ್ ಜಯಿಸಿ ಒಂದು ದಶಕ ಕಳೆದಿದೆ. ನೀವು ಆ ವಿಶೇಷ ಕ್ಷಣವನ್ನು ನೆನಪಿಸಿಕೊಳ್ಳಲು ಬಯಸುತ್ತೀರಾ?ಎಂದು ಕೇಳಿದಾಗ,
ನಾನು ಹಿಂದೆ ಆಗಿರುವುದನ್ನು ನೆನಪಿಸಿಕೊಳ್ಳಲು ಬಯಸುವುದಿಲ್ಲ. ಇದು ಮುನ್ನಡೆಯುವ ಸಮಯ ಎಂದು ನಾನು ಭಾವಿಸುವೆ. ನಾವು 2011ರಲ್ಲಿ ವಿಶ್ವಕಪ್ ಗೆದ್ದಿದ್ದೇವೆ ಎಂದು ಭಾರತೀಯ ಕ್ರಿಕೆಟ್‍ಗೆ ಯೋಚಿಸುತ್ತಾ ಇರಲು ಸಾಧ್ಯವಿಲ್ಲ. ವಿಶ್ವಕಪ್ ಗೆದ್ದ ಸಮಯದಲ್ಲೂ ನಾನು ಇದೇ ಮಾತನ್ನು ಹೇಳಿದ್ದೆ. ನಾವು ಸಾಧಿಸಬೇಕಾಗಿದ್ದನ್ನು ನಾವು ಮಾಡಿದ್ದೇವೆ. ನಾವು ಮಾಡಬೇಕಾಗಿಲ್ಲದ ಕೆಲಸ ನಾವು ಮಾಡಲಿಲ್ಲ. ಜನರು ಬಹಳಷ್ಟು ವಿಷಯಗಳನ್ನು ಹೇಳುತ್ತಲ್ಲೇ ಇರುತ್ತಾರೆ. ತಮ್ಮನ್ನು ಹೊಗಳುತ್ತಲೇ ಇರುತ್ತಾರೆ. ಆದರೆ ನಾನು ಆರೀತಿಯ ವ್ಯಕ್ತಿಯಲ್ಲ ಎಂದರು.
ಸಿಕ್ಸರ್ ವೊಂದು ವಿಶ್ವಕಪ್‍ನ್ನು ಗೆದ್ದುಕೊಟ್ಟಿದೆ ಎಂದು ಕಳೆದ ವರ್ಷ ವೆಬ್‍ಸೈಟ್‍ವೊಂದು ಉಲ್ಲೇಖಿಸಿತ್ತು. ಕೇವಲ ಒಬ್ಬ ವ್ಯಕ್ತಿಯಿಂದ ವಿಶ್ವಕಪ್ ವಿಜಯ ಲಭಿಸಿಲ್ಲ. ಇದು ಇಡೀ ತಂಡದಿಂದ ಸಾದ್ಯವಾಗಿತ್ತು ಎಂದು ನೀವು ಆಗ ಪ್ರತಿಕ್ರಿಯಿಸಿದ್ದೀರಿ.
ಕೇವಲ ಒಬ್ಬ ಆಟಗಾರ ನಮಗೆ ವಿಶ್ವಕಪ್ ಗೆದ್ದುಕೊಟ್ಟಿದ್ದಾನೆಂದು ನೀವು ಯೋಚಿಸುತ್ತಾರಾ?ಎಂದು ಕೇಳಿದಾಗ,
ಕೇವಲ ಒಬ್ಬನಿಂದ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿದ್ದರೆ ಭಾರತವು ಎಲ್ಲ ವಿಶ್ವಕಪ್‍ನ್ನು ಗೆಲ್ಲಬೇಕಾಗಿತ್ತು. ನನಗೆ ಅದರ ಮೇಲೆ ನಂಬಿಕೆ ಇಲ್ಲ. ಟೀಮ್ ಸ್ಪೋರ್ಟ್‍ನಲ್ಲಿ ವ್ಯಕ್ತಿಗೆ ಸ್ಥಾನವಿಲ್ಲ. ಎಲ್ಲವೂ ಕೊಡುಗೆಯನ್ನು ಅವಲಂಬಿಸಿದೆ. ನೀವು ಝಹೀರ್ ಖಾನ್ ಅವರ ಕೊಡುಗೆಯನ್ನು ಮರೆಯುತ್ತೀರಾ? ಫೈನಲ್ ನಲ್ಲಿ ಅವರು ಮೊದಲ ಸ್ಪೆಲ್ ನಲ್ಲಿ ಸತತ 3 ಮೇಡನ್ ಓವರ್ ಎಸೆದಿದ್ದರು. ಆಸ್ಟ್ರೇಲಿಯ ವಿರುದ್ದ ಯುವರಾಜ್ ಆಟವನ್ನು ನೀವು ಮರೆತುಬಿಟ್ಟಿರಾ?ಸಚಿನ್ ತೆಂಡುಲ್ಕರ್ ದಕ್ಷಿಣ ಆಫ್ರಿಕಾ ವಿರುದ್ದ ಸಿಡಿಸಿರುವ ಶತಕವನ್ನು ಮರೆಯಲು ಸಾಧ್ಯವೇ?ಒಂದು ಸಿಕ್ಸರ್ ನಿಂದ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿದ್ದರೆ ನನ್ನ ಪ್ರಕಾರ ಯುವರಾಜ್ ಸಿಂಗ್ ಭಾರತಕ್ಕೆ 6 ವಿಶ್ವಕಪ್ ಗೆದ್ದುಕೊಡಬೇಕಾಗಿತ್ತು. ಏಕೆಂದರೆ ಅವರು 2007ರಲ್ಲಿ ಡರ್ಬನ್ ನಲ್ಲಿ ನಡೆದಿದ್ದ ಟ್ವೆಂಟಿ-20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ದ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಗಳನ್ನು ಸಿಡಿಸಿದ್ದರು. ಯಾರೂ ಕೂಡ ಯುವರಾಜ್ ಕುರಿತು ಮಾತನಾಡುವುದಿಲ್ಲ. ಅವರು 2007 ಹಾಗೂ 2011ರ ವಿಶ್ವಕಪ್ ನಲ್ಲಿ ಸರಣಿಶ್ರೇಷ್ಟ ಪ್ರಶಸ್ತಿ ಜಯಿಸಿದ್ದರು. ಆದರೆ ನಾವು ಕೇವಲ ಒಂದು ಸಿಕ್ಸರ್ ಬಗ್ಗೆಯೇ ಮಾತನಾಡುತ್ತಿದ್ದೇವೆ ಎಂದರು.
ಫೈನಲ್ ನಲ್ಲಿ ಸಿಡಿಸಿರುವ 97 ರನ್ ನಿಮ್ಮ ವೃತ್ತಿಜೀವನದ ಅತ್ಯಂತ ವಿಶೇಷ ಇನಿಂಗ್ಸ್ ಆಗಿತ್ತೇ ಎಂದು ಕೇಳಿದಾಗ, ನನಗೆ ಇದು ಅತ್ಯಂತ ಸ್ಮರಣಿಯ ಇನಿಂಗ್ಸ್ ಆಗಿರಲಿಲ್ಲ. ನನಗೆ ಭಾರತದ ಗೆಲುವಿಗೆ ನೆರವಾಗಿರುವ ಪ್ರತಿಯೊಂದು ಇನಿಂಗ್ಸ್ ವಿಶೇಷವಾದುದು .ಪ್ರತಿ ರನ್ ದೇಶದ ಗೆಲುವಿಗೆ ನೆರವಾಗುವುದು ಅತ್ಯಂತ ಮುಖ್ಯ. ನಾನು 97 ರನ್ ಗಳಿಸಿದ್ದಕ್ಕಿಂತಲೂ ಜನರು ನನ್ನ ಬಳಿ ಬಂದು ವಿಶ್ವಕಪ್ ಗೆದ್ದಿದ್ದಕ್ಕೆ ಧನ್ಯವಾದ ಹೇಳಿರುವುದು ನನ್ನ ಪಾಲಿನ ದೊಡ್ಡ ಸಾಧನೆ. ಜನರ ಶ್ಲಾಘನೆ ನನ್ನ ದೊಡ್ಡ ಪದಕವಾಗಿದೆ. ನಾನು ಮಾಧ್ಯಮಕ್ಕಾಗಿ ಆಡುತ್ತಿಲ್ಲ. ಹೀಗಾಗಿ ನಾನು ಆ ಕುರಿತು ಚಿಂತಿಸುವುದಿಲ್ಲ ಎಂದರು.