×
Ad

‘ನಿವೃತ್ತ ಪೊಲೀಸರಿಗೂ ಆರೋಗ್ಯ ಭಾಗ್ಯ ಯೋಜನೆಯ ಪ್ರಯೋಜನ ಸಿಗಲಿ’

Update: 2021-04-02 17:35 IST

ಉಡುಪಿ, ಎ.2: ನಿವೃತ್ತ ಪೊಲೀಸರಿಗೆ ಜಿಲ್ಲೆಯ ಪ್ರಮುಖ ಆಸ್ಪತ್ರೆಗಳಲ್ಲಿ ಆರೋಗ್ಯ ಭಾಗ್ಯ ಯೋಜನೆಯ ಪ್ರಯೋಜನ ಸಿಗುವಂತಾಗಬೇಕು ಎಂದು ಸಶಸ್ತ್ರ ಮೀಸಲು ಪಡೆಯ ನಿವೃತ್ತ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಎ. ಚಂದ್ರಶೇಖರ್ ಆಗ್ರಹಿಸಿದ್ದಾರೆ.

ಶುಕ್ರವಾರ ನಗರದ ಪೊಲೀಸ್ ಕವಾಯತು ಮೈದಾನ (ಚಂದು ಮೈದಾನ)ದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಡೆದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡುತಿದ್ದರು.

ನಿವೃತ್ತ ಪೊಲೀಸರಿಗೆ ಆರೋಗ್ಯ ಭಾಗ್ಯ ಯೋಜನೆ ಕೆಲವೊಂದು ನಿಗದಿತ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ದೊರೆಯುತ್ತಿದ್ದು, ಪ್ರಮುಖ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಬೇಕು ಎಂದಲ್ಲಿ ಅದು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಗಮನ ಹರಿಸುವಂತೆ ಚಂದ್ರಶೇಖರ್ ಮನವಿ ಮಾಡಿದರು.

ಪೊಲೀಸರು ಸದಾ ಕೆಲಸದಲ್ಲಿಯೇ ಇದ್ದು, ಅವರಿಗೆ ಸಮಾಜದಲ್ಲಿ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಇಂಥ ಒತ್ತಡದ ಸಮಯದಲ್ಲಿ ಆರೋಗ್ಯದ ಬಗ್ಗೆ ಅವರು ಹೆಚ್ಚಿನ ಗಮನ ಹರಿಸಬೇಕು ಎಂದು ಎ.ಚಂದ್ರಶೇಖರ್ ಕಿವಿಮಾತು ಹೇಳಿದರು.

ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಪೊಲೀಸ್ ಕಲ್ಯಾಣ ನಿಧಿಯ ಮೂಲಕ ನಿವೃತ್ತ ಪೊಲೀಸ್ ಅಧಿಕಾರಿಗಳ ಆರೋಗ್ಯಕ್ಕೆ ಸಹಾಯ ಮಾಡುತ್ತ ಬಂದಿದ್ದು 2020-21ನೇ ಸಾಲಿನಲ್ಲಿ ಒಟ್ಟು ರೂ. 4,64,000 ಹಣವನ್ನು ವ್ಯಯಿಸಲಾಗಿದೆ ಎಂದರು.

ಇದೇ ವೇಳೆ ಜಿಲ್ಲೆಯಲ್ಲಿ ಕೋವಿಡ್ ಸಮಸ್ಯೆ ಕಡಿಮೆಯಾಗಿದೆ ಎಂದು ನಿರ್ಲಕ್ಷ ವಹಿಸದೆ ಪ್ರತಿಯೊಬ್ಬ ಅಧಿಕಾರಿಗಳು ಮತ್ತು ನಿವೃತ್ತ ಪೊಲೀಸರು ಕಡ್ಡಾಯವಾಗಿ ಕೋವಿಡ್ ಲಸಿಕೆಯನ್ನು ಪಡೆಯುವಂತೆ ಮನವಿ ಮಾಡಿದರು.

ಇದೇ ವೇಳೆ ಪೊಲೀಸ್ ಧ್ವಜವನ್ನು ಬಿಡುಗಡೆ ಮಾಡಿ ಬಳಿಕ ಮಾರಾಟ ಮಾಡಲಾಯಿತು. 7 ಪೊಲೀಸ್ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿ ಎಲ್ಲರ ಗಮನ ಸೆಳೆದವು. ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕಲ್ಯಾಣ ನಿಧಿಯ ಚೆಕ್‌ಗಳನ್ನು ಇದೇ ವೇಳೆ ವಿತರಿಸಲಾಯಿತು.

ಕಾರ್ಯಕ್ರಮಲ್ಲಿ ಉಡುಪಿ ಡಿವೈಎಸ್ಪಿಸದಾನಂದ ನಾಯಕ್, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಕಾರ್ಕಳ ಡಿವೈಎಸ್ಪಿ ಭರತ್ ರೆಡ್ಡಿ, ಡಿಎಆರ್ ಡಿವೈಎಸ್ಪಿ ರಾಘವೇಂದ್ರ, ನಿವೃತ್ತ ಪೊಲೀಸ್ ಅಧಿಕಾರಗಳ ಸಂಘದ ಡಾ. ಪ್ರಭುದೇವ ಮಾನೆ ಹಾಗೂ ಇತರ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಅನಂತ ಪದ್ಮನಾಭ ಅವರು ವಂದಿಸಿ, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ಅವರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News