ರೊಹಿಂಗ್ಯಾ ಬಾಲಕಿಯ ಗಡಿಪಾರಿಗೆ ಭಾರತದ ಯತ್ನ: ಸ್ವೀಕರಿಸಲು ಮ್ಯಾನ್ಮಾರ್ ನಕಾರ

Update: 2021-04-02 15:28 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಎ.2: ಎರಡು ವರ್ಷಗಳಲ್ಲಿ ‘ಅಸ್ಪಷ್ಟ ಸನ್ನಿವೇಶ ’ಗಳಲ್ಲಿ ಭಾರತಕ್ಕೆ ಆಗಮಿಸಿದ್ದ 14ರ ಹರೆಯದ ರೊಹಿಂಗ್ಯಾ ಬಾಲಕಿಯನ್ನು ಗಡಿಪಾರು ಮಾಡಲು ಭಾರತವು ಯತ್ನಿಸುತ್ತಿದೆ,ಅದರೆ ಆಕೆಯನ್ನು ಸ್ವೀಕರಿಸಲು ಮ್ಯಾನ್ಮಾರ್ ನಿರಾಕರಿಸಿದೆ ಎಂದು ತಿಳಿದು ಬಂದಿದೆ.

ಅಸ್ಸಾಮಿನ ಕಾಚಾರ್ ಜಿಲ್ಲಾ ಪೊಲೀಸರು ಗುರುವಾರ ಬಾಲಕಿಯನ್ನು ಮಣಿಪುರದ ಮೋರೆ ಎಂಬಲ್ಲಿಯ ಭಾರತ-ಮ್ಯಾನ್ಮಾರ್ ಗಡಿಗೆ ಕರೆದೊಯ್ದಿದ್ದು,ಅಲ್ಲಿ ಅವರು ಆಕೆಯನ್ನು ಹಸ್ತಾಂತರಿಸಬೇಕಿತ್ತು. ಆದರೆ ಮ್ಯಾನ್ಮಾರ್‌ನ ವಲಸೆ ಇಲಾಖೆಯು ಪ್ರವೇಶದ್ವಾರವನ್ನು ತೆರೆಯಲು ನಿರಾಕರಿಸಿದ್ದು,ಸದ್ಯಕ್ಕೆ ಗಡಿಪಾರಿಗೆ ಪರಿಸ್ಥಿತಿ ಸೂಕ್ತವಾಗಿಲ್ಲ ಎಂದು ಸ್ಪಷ್ಟಪಡಿಸಿತ್ತು. ಬಾಲಕಿಯ ಕುಟುಂಬವು ಬಾಂಗ್ಲಾದೇಶದಲ್ಲಿ ನಿರಾಶ್ರಿತರ ಶಿಬಿರವೊಂದರಲ್ಲಿದೆ. ಮ್ಯಾನ್ಮಾರ್‌ನಲ್ಲಿ ಸೇನೆಯ ಬಂಡಾಯವನ್ನು ವಿರೋಧಿಸಿ ಪ್ರತಿಭಟನೆಗಳನ್ನು ನಡೆಸುತ್ತಿರುವವರನ್ನು ದಮನಿಸಲು ಮಿಲಿಟರಿ ಸರಕಾರವು ತೀವ್ರ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದು,ಪರಿಸ್ಥಿತಿ ಪ್ರಕ್ಷುಬ್ಧಗೊಂಡಿದೆ. ಹೀಗಾಗಿ ಮತ್ತೆ ಭಾರತಕ್ಕೆ ನಿರಾಶ್ರಿತರ ಹರಿವು ಆರಂಭಗೊಂಡಿದೆ.

ಸಿಲ್ಚಾರ್ ಪೊಲೀಸರು ತಿಳಿಸಿರುವಂತೆ 2019ರಲ್ಲಿ ಸಿಲ್ಚಾರ್ ಪಟ್ಟಣದ ಸಮೀಪದ ರೋಂಗಪುರ ಪ್ರದೇಶದಲ್ಲಿ ಈ ಅಪ್ರಾಪ್ತ ವಯಸ್ಕ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯನ್ನು ರಕ್ಷಿಸಿದ ಪೊಲೀಸರು ಆಶ್ರಯ ಧಾಮವೊಂದಕ್ಕೆ ಹಸ್ತಾಂತರಿಸಿದ್ದು,ಸುಮಾರು ಒಂದು ವರ್ಷದ ಬಳಿಕ ಬಾಲಕಿಯನ್ನು ನಿವೇದಿತಾ ನಾರಿ ಸಂಸ್ಥಾಕ್ಕೆ ಕಳುಹಿಸಲಾಗಿತ್ತು.

ಬಾಲಕಿಯ ಗಡಿಪಾರು ಯತ್ನ ಯಶಸ್ವಿಯಾಗಿಲ್ಲವಾದರೂ,ಸರಕಾರದ ಈ ಕ್ರಮ ಅಮಾನವೀಯ ಎಂದು ಮಾನವಹಕ್ಕುಗಳ ಹೋರಾಟಗಾರರು ಬಣ್ಣಿಸಿದ್ದಾರೆ. ಬಾಲಕಿಯ ಹೆತ್ತವರು ಬಾಂಗ್ಲಾದೇಶದ ನಿರಾಶ್ರಿತರ ಶಿಬಿರದಲ್ಲಿದ್ದಾರೆ ಮತ್ತು ಮ್ಯಾನ್ಮಾರ್‌ನಲ್ಲಿ ಪ್ರಕ್ಷುಬ್ಧ ಸ್ಥಿತಿಯಿದೆ,ಹೀಗಿರುವಾಗ ಭಾರತ ಸರಕಾರವು ಅಪ್ರಾಪ್ತ ವಯಸ್ಕ ಬಾಲಕಿಯನ್ನು ಆ ದೇಶಕ್ಕೆ ಮರಳಿಸಲು ಯೋಚನೆಯನ್ನು ಮಾಡಿದ್ದಾದರೂ ಹೇಗೆ ಎಂದು ಪ್ರಶ್ನಿಸಿದ ಸಿಲ್ಚಾರ್‌ನ ಮಾನವ ಹಕ್ಕು ಕಾರ್ಯಕರ್ತ ಕಮಲ್ ಚಕ್ರವರ್ತಿ ಅವರು,ಇದು ಮಾನವ ಹಕ್ಕುಗಳ ಉಲ್ಲಂಘನೆಯ ಸ್ಪಷ್ಟ ಪ್ರಕರಣವಾಗಿದೆ. ಈ ಬಗ್ಗೆ ನಾವು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆಯಲಿದ್ದೇವೆ. ಬಾಲಕಿ ಭವಿಷ್ಯದಲ್ಲಿ ಇಂತಹ ಪ್ರಯತ್ನಗಳ ಬಲಿಪಶುವಾಗದಂತಿರಲು ನಾವು ಆಕೆಗೆ ಸೂಕ್ತ ಆಶ್ರಯವನ್ನೂ ಒದಗಿಸಲಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News