×
Ad

ಬಸ್‌ಗಳಲ್ಲಿ ಅಂಬೇಡ್ಕರ್ ವೃತ್ತ ಸ್ಟಿಕ್ಕರ್ ಅಳವಡಿಕೆ: ದಲಿತ ಮುಖಂಡರ ಶ್ಲಾಘನೆ

Update: 2021-04-02 21:06 IST

ಮಂಗಳೂರು, ಎ.2: ನಗರದ ಬಸ್‌ಗಳಲ್ಲಿ ಜ್ಯೋತಿ ವೃತ್ತವೆಂದು ಹಾಕಲಾಗಿದ್ದ ಸ್ಟಿಕ್ಕರ್ ತೆಗೆಸಿ, ಅಂಬೇಡ್ಕರ್ ವೃತ್ತ ಎಂದು ಸ್ಟಿಕ್ಕರ್ ಅಳವಡಿಸಿದ್ದಕ್ಕೆ ಪೊಲೀಸ್ ಅಧಿಕಾರಿಗಳ ಬಗ್ಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿಂದು ನಡೆದ ದಲಿತರ ಕುಂದು ಕೊರತೆ ಸಭೆಯಲ್ಲಿ ಶ್ಲಾಘನೆ ವ್ಯಕ್ತವಾಯಿತು.

ಸಭೆಯಲ್ಲಿ ದಲಿತ ಮುಖಂಡರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರ ಮೂಲಕ ಡಿಸಿಪಿ ಹರಿರಾಂ ಶಂಕರ್, ವಿನಯ ಗಾಂವ್ಕರ್ ಹಾಗೂ ಎಸಿಪಿ ನಟರಾಜ್ ಅವರನ್ನು ಪೇಟ ಶಾಲು ಹೊದಿಸಿ ಗೌರವಿಸಿದರು.

ಕುಂದು ಕೊರತೆ ಸಭೆಯಲ್ಲಿ ದಲಿತ ಮುಖಂಡ ವಿಶ್ವನಾಥ್ ಎಂಬವರು ಮಾತನಾಡಿ, ಅರಣ್ಯ ಇಲಾಖೆಯಿಂದ ದಲಿತ ಸಮುದಾಯದವರಿಗೆ ಉಚಿತವಾಗಿ ಅಡುಗೆ ಅನಿಲ ವಿತರಿಸಲಾಗುತ್ತಿದೆ. ಆದರೆ ಏಜೆನ್ಸಿಯವರು 500 ರೂ. ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡುವಂತೆ ಡಿಸಿಪಿ ಸಲಹೆ ನೀಡಿದರು.ಐಕಳದಲ್ಲಿ ದಲಿತ ಮಹಿಳೆಯ ಮನೆಯ ಬಳಿ ಅಳವಡಿಸಿರುವ ಮೊಬೈಲ್ ಟವರ್‌ನಿಂದ ತೊಂದರೆಯಾಗುತ್ತಿದೆ. ಅದರಿಂದಾಗಿ ಮಹಿಳೆ ಅನಾರೋಗ್ಯ ಪೀಡಿತರಾಗಿದ್ದು, ಅದನ್ನು ತೆಗೆಯಬೇಕೆಂದು ಎಂದು ದಲಿತ ಮುಖಂಡ ಎಸ್.ಪಿ.ಆನಂದ ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸುವಂತೆ ಉತ್ತರ ಉಪವಿಭಾಗದ ಎಸಿಪಿ ಮಹೇಶ್ ಅವರಿಗೆ ಡಿಸಿಪಿ ಸೂಚಿಸಿದರು.

ಕಿನ್ನಿಗೋಳಿಯಲ್ಲಿ ಮೀನು ಮಾರಾಟ ಮಾಡುವ ದಲಿತ ಮಹಿಳೆಯರಿಗೆ ಬೇರೆ ಮಾರಾಟಗಾರರಿಂದ ತೊಂದರೆಯಾಗುತ್ತಿದೆ. ಪ್ರತ್ಯೇಕವಾಗಿ ಗ್ರಾ.ಪಂ. ವತಿಯಿಂದ ಕಟ್ಟಡ ನಿರ್ಮಾಣ ಮಾಡಿ ಕೊಡುವ ಭರವಸೆ ಮಾತ್ರ ಸಿಕ್ಕಿದೆ. ದಲಿತ ಬಡ ಮಹಿಳೆಯರಿಗೆ ನ್ಯಾಯ ದೊರಕಿಸುವಂತೆ ದಲಿತ ಮುಖಂಡ ಜಗದೀಶ್ ಪಾಂಡೇಶ್ವರ ಒತ್ತಾಯಿಸಿದರು.

ಈ ಸಂಬಂಧ ಈಗಾಗಲೇ ಎರಡು ಪ್ರಕರಣಗಳು ದಾಖಲಾಗಿವೆ. ಇತ್ತಂಡದವರನ್ನು ಕರೆಸಿ ಮಾತುಕತೆ ನಡೆಸಿ, ಪ್ರಕರಣವನ್ನು ಸೌಹಾರ್ದ ಯುತವಾಗಿ ಪರಿಹರಿಸುವಂತೆ ಹರಿರಾಂ ಶಂಕರ್ ಅವರು ಎಸಿಪಿ ಮಹೇಶ್ ಅವರಿಗೆ ಸೂಚಿಸಿದರು.ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲಿ ಅಳವಡಿಸಿದ ಅಂಬೇಡ್ಕರ್ ನಾಮಫಲಕವನ್ನು ಪುರಸಭೆ ಅಧಿಕಾರಿಗಳೇ ಕಿತ್ತುಕೊಂಡು ಹೋಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಗದೀಶ್ ಒತ್ತಾಯಿಸಿದರು.

ಪುರಸಭೆ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆಯಲಾಗುವುದು ಎಂದು ಡಿಸಿಪಿ ಹೇಳಿದರು.ಕಂಕನಾಡಿಯ ಕುದ್ಕೋರಿಗುಡ್ಡದಲ್ಲಿ ಸರ್ಕಾರಿ ಜಾಗದಲ್ಲಿ ಮೇಲ್ವರ್ಗದವರು ಕೊರಗಜ್ಜನ ಗುಡಿ ನಿರ್ಮಾಣ ಮಾಡುವ ಬಗ್ಗೆ ದಲಿತರ ವಿರೋಧವಿದ್ದು, ಈ ಹಿಂದೆ ದೂರಿನ ಮೇರೆಗೆ ಕದ್ರಿ ಪೊಲೀಸರು ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದ್ದರು. ಈಗ ಮತ್ತೆ ಕಾಮಗಾರಿ ಆರಂಭಗೊಂಡಿದೆ ಎಂದು ದಲಿತ ಮುುುಖಂಡ ಅನಿಲ್ ಕುಮಾರ್ ಹೇಳಿದರು.

ಪರಿಶೀಲಿಸಿ, ಕ್ರಮ ಕೈಗೊಳ್ಳುವಂತೆ ಡಿಸಿಪಿ ಅವರು ಕದ್ರಿ ಇನ್‌ಸ್ಪೆಕ್ಟರ್ ಸವಿತ್ರತೇಜ ಅವರಿಗೆ ಸೂಚಿಸಿದರು.ಬಂಟ್ವಾಳ ತಾಲೂಕು ಕುರ್ನಾಡು ಗ್ರಾಪಂನಲ್ಲಿ ಆರು ಮಂದಿ ಮಾಡಬೇಕಾದ ಶುಚಿತ್ವದ ಕೆಲಸವನ್ನು ಬಾಬು ಮತ್ತು ಕುಸುಮ ದಂಪತಿ ಅತಿ ಕಡಿಮೆ ವೇತನದಲ್ಲಿ 12 ವರ್ಷಗಳಿಂದ ಮಾಡುತ್ತಿದ್ದಾರೆ. ಅವರನ್ನು ಖಾಂಗೊಳಿಸಬೇಕು. ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ನೀಡಬೇಕು ಎಂದು ಕಳೆದ ಸಭೆಯಲ್ಲಿ ಒತ್ತಾಯಿಸಲಾಗಿದ್ದರೂ ಪ್ರಯೋಜನವಾಗಿಲ್ಲ ಎಂದು ದಲಿತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಕುರ್ನಾಡು ಗ್ರಾಪಂಗೆ ಪತ್ರ ಬರೆಯಲಾಗಿತ್ತು. ಪೌರ ಕಾಮಿರ್ಕರ ಖಾಯಂಗೊಳಿಸಲು ಕನಿಷ್ಠ 7ನೇ ತರಗತಿ ಉತ್ತೀರ್ಣ ಆಗಿರಬೇಕು. 56 ವರ್ಷ ವಯಸ್ಸಾದ ಕಾರಣ ಅವರನ್ನು ಖಾಯಂ ಮಾಡಲು ಆಗುವುದಿಲ್ಲ. ಆದರೆ ಅವರಿಗೆ ಗೌರವ ಧನ ಹೆಚ್ಚಿಗೆ ಮಾಡಲಾಗುವುದು ಎಂಬ ಉತ್ತರ ಗ್ರಾಪಂನಿಂದ ಬಂದಿದೆ ಎಂದು ಹೇಳಿದರು.

ದಲಿತರಿಗೆ ಮೀಸಲಾಗಿರುವ ಟೆಂಡರ್ ಹೊರ ಜಿಲ್ಲೆಯವರಿಗೆ: ಆರೋಪಮಹಾನಗರಪಾಲಿಕೆಯಲ್ಲಿ ದಲಿತ ಸಮುದಾಯಕ್ಕೆ ಮೀಸಲಾಗಿರುವ ಕಾಮಗಾರಿ ಟೆಂಡರ್‌ಗಳನ್ನು ಅರ್ಹತೆ ಇಲ್ಲದ ಹೊರ ಜಿಲ್ಲೆಯವರಿಗೆ ನೀಡಲಾಗುತ್ತಿದೆ. ಪಾಲಿಕೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ದಲಿತ ಮುಖಂಡ ದುರ್ಗಾಪ್ರಸಾದ್ ಸುರತ್ಕಲ್ ಆರೋಪಿಸಿದರು. ಈ ಸಂಬಂಧ ಪಾಲಿಕೆ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದು ಡಿಸಿಪಿ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News