ಮುಲ್ಲಡ್ಕ ಗುರುಪ್ರಸಾದ್ ರಾಘು ಶೆಟ್ಟಿ ನಿಧನ
ಕಾರ್ಕಳ : ಮುಂಬೈಯಲ್ಲಿ ಉದ್ಯಮಿಯಾಗಿದ್ದ ಮುಂಡ್ಕೂರು ಮುಲ್ಲಡ್ಕ ಗುರುಪ್ರಸಾದ್ ರಾಘು ಟಿ. ಶೆಟ್ಟಿ (75) ಶುಕ್ರವಾರ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಮುಂಬೈಯಲ್ಲಿ ಉದ್ಯಮಿಯಾಗಿದ್ದ ಇವರು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಸರ್ವಾಂಗೀಣ ಅಭಿವೃದ್ಧಿಯ ರೂವಾರಿಯಾಗಿದ್ದರು. ಕ್ಷೇತ್ರದ ಗರ್ಭಗುಡಿ ನಿರ್ಮಾಣ, ನಾನಾಪಾಟೇಕರ್ ಸ್ನಾನಗೃಹ ನಿರ್ಮಾಣದ ಕಾರಣಕರ್ತರಾಗಿದ್ದರು.
ಕಜೆ ಶ್ರೀ ಮಹಮ್ಮಾಯೀ ದೇಗುಲ ಸಹಿತ ವಿವಿಧ ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮುಂಡ್ಕೂರಿನಲ್ಲಿ ಉಚಿತ ಸಾಮೂಹಿಕ ವಿವಾಹಗಳನ್ನು ನಿರಂತರವಾಗಿ ನಡೆಸಿಕೊಂಡು ನೂರಾರು ಜೋಡಿಗೆ ಕಂಕಣ ಭಾಗ್ಯ ಕಲ್ಪಿಸಿದ್ದರು. ಮುಂಡ್ಕೂರು ಹಾಗೂ ಮುಂಬೈಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವವನ್ನೂ ಅದ್ದೂರಿಯಾಗಿ ನಡೆಸಿದ್ದರು. ಅಲ್ಲದೇ ಯಕ್ಷಗಾನ, ನಾಟಕ ಹಾಗೂ ಸಿನೆಮಾಗಳ ಅಭಿಮಾನಿಯಾಗಿ ಕಲಾಪೋಷಕರಾಗಿ ನೂರಾರು ಕಲಾವಿದರಿಗೆ ನೆರವು ನೀಡಿದ್ದು, ತುಳು ಸಿನೆಮಾಗಳ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು. ಶಿಕ್ಷಣ ಕ್ಷೇತ್ರಕ್ಕೂ ಸಹಕಾರ ನೀಡಿದ್ದ ರಾಘು ಶೆಟ್ಟಿಯವರು ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ವಿದ್ಯಾವರ್ಧಕ ಪ.ಪೂ. ಕಾಲೇಜಿನ ಅಭಿವೃದ್ಧಿಯಲ್ಲೂ ಕೈಜೋಡಿಸಿದ್ದರು.
ಶೆಟ್ಟರ ನಿಧನಕ್ಕೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಮುಂಡ್ಕೂರು ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರವೀಂದ್ರ ಶೆಟ್ಟಿ, ವಾದಿರಾಜ ಶೆಟ್ಟಿ, ಪ್ರಧಾನ ಅರ್ಚಕ ರಾಮದಾಸ ಆಚಾರ್ಯ, ವಿದ್ಯಾವರ್ಧಕ ಪ.ಪೂ. ಕಾಲೇಜಿನ ಸಂಚಾಲಕ ಡಾ.ಪಿ. ಬಾಲಕೃಷ್ಣ ಆಳ್ವ ಮತ್ತಿತರರು ಸಂತಾಪ ಸೂಚಿಸಿದ್ದಾರೆ.