ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ಆಕರ್ಷಿಸಲು ವಿವಿಧ ಯೋಜನೆ

Update: 2021-04-02 16:23 GMT

ಪಡುಬಿದ್ರಿ: ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ಈಗಾಗಲೇ ಉಡುಪಿ ಜಿಲ್ಲೆಯ ಜನಾಕರ್ಷಣೆಯ ತಾಣವೆನಿಸಿದೆ. ಮುಂದಿನ ದಿನಗಳಲ್ಲಿ ತೇಲುವ ರಸ್ಟೋರೆಂಟ್, ಬೀಚ್ ಸಮೀಪದ ಕಾಮಿನಿ ನದಿಯಲ್ಲಿ ಇರುವ ದ್ವೀಪ ಅಭಿವೃದ್ಧಿ ಪಡಿಸಿ ತೂಗು ಸೇತುವೆ ನಿರ್ಮಾಣ ಯೋಜನೆಗೆ ಆದ್ಯತೆ ನೀಡಲಾಗುವುದು. ಇದರಿಂದ ಸ್ಥಳೀಯ ರಿಗೆ ರಷ್ಟು ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.

ಅವರು ಶುಕ್ರವಾರ ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚ್‍ನಲ್ಲಿ ಫುಡ್ ಕೋರ್ಟ್, ಪ್ರವಾಸೀ ಆಕರ್ಷಣೆಗಾಗಿ ಆರಂಭಿಸಲಾದ ಕಾಯಕಿಂಗ್, ಬೋಟಿಂಗ್ ವ್ಯವಸ್ಥೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಉಳಿದಿರುವ ತಡೆಗೋಡೆಯನ್ನು 50 ಲಕ್ಷ ರೂ.ಗಳಲ್ಲಿ ಪೂರ್ಣಗೊಳಿಸಬೇಕಿದೆ. ರಸ್ತೆ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಹಂತ, ಹಂತ ವಾಗಿ ಕಾಮಿನಿ ಹೊಳೆಗೆ ಅಡ್ಡವಾಗಿ ಸೇತುವೆ ನಿರ್ಮಾಣ, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಲ್ಲಿಂದ ಪಡುಬಿದ್ರಿಯ ಮುಖ್ಯ ಬೀಚ್‍ ವರೆಗೆ ಅಭಿವೃದ್ಧಿಗೊಳಿಸಲಾಗುತ್ತದೆ.

ಪ್ರವಾಸೋದ್ಯಮ ಇಲಾಖಾ ಉಪ ನಿರ್ದೇಶಕ ಸೋಮಶೇಖರ್, ಬ್ಲೂ ಫ್ಲ್ಯಾಗ್ ಬೀಚ್ ನೋಡೆಲ್ ಅಧಿಕಾರಿ ಚಂದ್ರಶೇಖರ್ ನಾಯಕ್, ಮೀನುಗಾರಿಕಾ ಇಲಾಖಾ ಉಪ ನಿರ್ದೇಶಕ ಗಣೇಶ್, ಪಶು ಸಂಗೋಪನಾ ಇಲಾಖಾ ಉಪ ನಿರ್ದೇಶಕ ಡಾ. ಹರೀಶ್, ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ಉಡುಪಿ ತಾಲ್ಲೂಕು ಪಂಚಾಯಿತಿ ಸದಸ್ಯೆ ನೀತಾ ಗುರುರಾಜ್, ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆ(ಆ್ಯಕ್ಟ್)ನ ಅಧ್ಯಕ್ಷ ಮನೋಹರ ಶೆಟ್ಟಿ ಕಾಪು ಹಾಗೂ ಕಾರ್ಯದರ್ಶಿ ಗೌರವ್ ಶೇಣವ, ಪಡುಬಿದ್ರಿ ಗ್ರಾಮ  ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು, ಉಪಾಧ್ಯಕ್ಷೆ ಯಶೋದಾ, ಮೊಗವೀರ ಮುಂದಾಳು ಸುಕುಮಾರ ಶ್ರೀಯಾನ್, ಬೀಚ್ ಮ್ಯಾನೇಜರ್ ವಿಜಯ ಶೆಟ್ಟಿ ಮತ್ತಿತರಿದ್ದರು. 

ಕಾಯಕಿಂಗ್‍ಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಜಿ. ಜಗದೀಶ್, ಕಾಮಿನೀ ಹೊಳೆಯಲ್ಲಿ ಬೀಚ್ ಮ್ಯಾನೇಜರ್ ವಿಜಯ ಶೆಟ್ಟಿ ಅವರೊಂದಿಗೆ ಕಾಯಕಿಂಗ್ ಮೂಲಕ ಒಂದು ಸುತ್ತು ಬಂದು ಸಮೀಪದಲ್ಲೇ ಇರುವ ದ್ವೀಪವನ್ನು ಕಂಡು ಆನಂದಿಸಿದರು. ಕಾಯಕಿಂಗ್ ಮಾಡುವ ಮೂಲಕ ಆನಂದಿಸಿದರು.

ಬ್ಲೂ ಫ್ಲ್ಯಾಗ್ ಬೀಚ್‍ಗೆ ಕೇಂದ್ರ ಸರಕಾರವು ಪ್ರತೀ ತಿಂಗಳಿಗೆ 11ಲಕ್ಷ ರೂ.ಗಳನ್ನು ಇಲ್ಲಿನ ಸುವ್ಯವಸ್ಥೆಗಳಿಗಾಗಿ ನೀಡುತ್ತಿತ್ತು. ಆದರೆ ಎಪ್ರಿಲ್  ರಿಂದ ಜಿಲ್ಲಾಡಳಿತಕ್ಕೆ ಬೀಚ್‍ನ್ನು ಹಸ್ತಾಂತರಿಸಿದೆ. ಈ ವೇಳೆ ಕೇಂದ್ರ ಸರ್ಕಾರ ಇಲ್ಲಿ ಇರುವ ಉದ್ಯೋಗಿಗಳಲ್ಲಿ 32 ಮಂದಿಯನ್ನು ಮಾತ್ರ ಉಳಿಸಿಕೊಳ್ಳಲು  ಸೂಚಿಸಿತ್ತು. ಜಿಲ್ಲಾಡಳಿತವು ಎಲ್ಲಾ 49ಮಂದಿಯನ್ನೂ ಉಳಿಸಿಕೊಂಡಿದೆ. ಆದಾಯವನ್ನು ಹೆಚ್ಚಿಸಿಕೊಳ್ಳಲು ಪುಡ್‍ಕೋರ್ಟ್ ಹಾಗೂ ಕಾಯಕಿಂಗ್ ಆರಂಭಿಸಿದೆ. ಇದೀಗ ಮೂರು ಕಾಯಕಿಂಗ್ ಬೋಟ್‍ಗಳನ್ನು ಆರಂಭಿಸಿದ್ದು, ಇನ್ನೂ ಮೂರನ್ನು ಶೀಘ್ರದಲ್ಲೇ ಸೇರ್ಪಡೆ ಗೊಳಿಸಲಾಗುವುದು.

ರಾಜ್ಯ ಸರಕಾರದ ಅನುದಾನದೊಂದಿಗೆ ತೇಲುವ ರೆಸ್ಟೋರೆಂಟ್ ಪ್ರಾರಂಭ, ಈಗಿನ 49 ಮಂದಿ ಸಿಬಂದಿ ವರ್ಗವನ್ನು ಉಳಿಸಿಕೊಂಡು ಮುಂದಿನ ಎರಡು ವರ್ಷಗಳಲ್ಲಿ 100 ಮಂದಿಗೆ ಉದ್ಯೋಗ ಸೃಷ್ಟಿ ಯೋಜನೆ, ಹಾಗೂ ತೂಗು ಸೇತುವೆ ನಿರ್ಮಾಣದ ಮೂಲಕ ಅಭಿವೃದ್ಧಿಗಳಿಗೆ ಆದ್ಯತೆಯನ್ನು ನೀಡಲಾಗುತ್ತಿದೆ. ಕಾಯಕಿಂಗ್‍ಗೆ ಅರ್ಧಗಂಟೆಗೆ 100ರೂ. ದರ ಹಾಗೂ ಬೋಟಿಂಗ್‍ಗೆ ಪ್ರತೀ ಪ್ರವಾಸಿಗರಿಗೆ 50ರೂ. ದರ ನಿಗದಿಪಡಿಸಲಾಗಿದೆ. ಪಡುಬಿದ್ರಿ ಮುಖ್ಯ ಬೀಚ್ ನಿರ್ವಹಣೆಯನ್ನು ಸ್ಥಳೀಯರಿಗೇ ವಹಿಸಲು ಜಿಲ್ಲಾಡಳಿತವು ನಿರ್ಧರಿಸಿದೆ. ಅಲ್ಲಿ ನಡೆಯಬೇಕಾಗಿರುವ ಸ್ವಚ್ಛತೆ, ಶೌಚಾಲಯ ನಿರ್ಮಾಣ, ತಡೆಗೋಡೆ ರಚನೆ ಮುಂತಾದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಆ ಬಳಿಕ ಸ್ಥಳೀಯ ಉಸ್ತುವಾರಿಗೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಅಸಮಾಧಾನ: ಪಡುಬಿದ್ರಿಯ ಮುಖ್ಯಬೀಚ್‍ನಲ್ಲಿ ಪಿಡಬ್ಲ್ಯೂ ಇಲಾಖೆಯಿಂದ ನಿರ್ಮಾಣಗೊಳ್ಳುತ್ತಿರುವ ಶೌಚಾಲಕ ನಿರ್ಮಾಣ ವಿಳಂಬವಾ ಗುತ್ತಿರುವದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ್, ಅಲ್ಲಿ ಶೌಚಾಲಯ ನಿರ್ಮಾಣ ಮಾಡುತ್ತಿದೆಯೇ ಅಥವಾ ವಿಧಾನಸೌಧ ನಿರ್ಮಿಸುತ್ತಿದೆಯೇ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News