ಮಂಗಳೂರು: ಸಂಘಪರಿವಾರದ ಕಾರ್ಯಕರ್ತರಿಂದ ಯುವಕನಿಗೆ ಚೂರಿ ಇರಿತ; ನಾಲ್ಕು ಮಂದಿ ಆರೋಪಿಗಳ ಬಂಧನ
ಮಂಗಳೂರು, ಎ.2: ಮಂಗಳೂರಿನಿಂದ ಬೆಂಗಳೂರಿಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನಿಗೆ ಸಂಘಪರಿವಾರದ ಕಾರ್ಯಕರ್ತರು ಎನ್ನಲಾದ ತಂಡವೊಂದು ಹಲ್ಲೆ ನಡೆಸಿ ಚೂರಿಯಿಂದ ಇರಿದ ಘಟನೆ ಗುರುವಾರ ರಾತ್ರಿ ನಗರದ ಪಂಪ್‌ವೆಲ್ ಬಳಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಗಾಯಗೊಂಡ ಯುವಕನನ್ನು ಮೂಲತಃ ಕಸಬಾ ಬೆಂಗರೆಯ ಪ್ರಸ್ತುತ ನಗರದ ಫ್ಲಾಟ್‌ವೊಂದರಲ್ಲಿ ವಾಸವಾಗಿರುವ ಅಸ್ವಿದ್ ಅನ್ವರ್ ಮುಹಮ್ಮದ್ (24) ಎಂದು ಗುರುತಿಸಲಾಗಿದೆ.
ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ಸಿನಲ್ಲಿ ಈ ಯುವಕ ಮತ್ತಾತನ ಸ್ನೇಹಿತೆಯೊಂದಿಗೆ ಪ್ರಯಾಣಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಂಘ ಪರಿವಾರದ ಕಾರ್ಯಕರ್ತರು ರಾತ್ರಿ ಸುಮಾರು 9:30ಕ್ಕೆ ಬಸ್ಸನ್ನು ತಡೆದು ನಿಲ್ಲಿಸಿ ಯುವಕ ಮತ್ತು ಯುವತಿಯನ್ನು ಬಸ್ಸಿನಿಂದ ಕೆಳಗಿಳಿಸಿ ಹಲ್ಲೆ ನಡೆಸಿದ್ದಾರೆ. ಯುವಕನಿಗೆ ಚೂರಿ ಇರಿತದ ಗಾಯವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ಕು ಮಂದಿ ಸೆರೆ: ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಕನಾಡಿ ನಗರ ಠಾಣೆಯಲ್ಲಿ ಹಲ್ಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಾಗಿದೆ.ಅಲ್ಲದೆ ಅತ್ತಾವರ ಬಾಬುಗುಡ್ಡೆಯ ಬಾಲಚಂದ್ರ ಯಾನೆ ಬಾಲು (28), ಬಂದರ್ ಕಂದುಕದ ಧನುಷ್ ಭಂಡಾರಿ ಯಾನೆ ಕಂದಕ್ ಧನು ಯಾನೆ ಸಂತು (25), ಶಕ್ತಿನಗರದ ಜಯಪ್ರಕಾಶ್ (27), ಉರ್ವ ಮಾರಿಗುಡಿ ಕ್ರಾಸ್ ರಸ್ತೆಯ ಅನಿಲ್ ಕುಮಾರ್ (38) ಎಂಬವರನ್ನು ಬಂಧಿಸಲಾಗಿದೆ.
ಬಾಲಚಂದ್ರನ ವಿರುದ್ಧ ಕದ್ರಿ ಮತ್ತು ಕಂಕನಾಡಿ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ಧನುಷ್ ವಿರುದ್ಧ ಪಾಂಡೇಶ್ವರದಲ್ಲಿ 1 ಕೊಲೆ ಪ್ರಕರಣ, ಆರ್‌ಸಿಎಫ್ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ, ಬಂದರ್ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿವೆ. ಜಯಪ್ರಕಾಶ್ ವಿರುದ್ಧ ಉರ್ವ ಠಾಣೆಯಲ್ಲಿ 1, ಕದ್ರಿಯಲ್ಲಿ 1, ಕಂಕನಾಡಿ ನಗರ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿವೆ. ಅನಿಲ್ ಕುಮಾರ್ ವಿರುದ್ಧ ಪಾಂಡೇಶ್ವರದಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ.
ಆರೋಪಿಗಳ ವಿರುದ್ಧ Cr. No. 45/21 u.s. 143,147,148,341,324.307, 153A,354, 504,507,149 ipc ಸೆಕ್ಷನ್ ದಾಖಲಾಗಿದೆ.
ಕೆಲಸಕ್ಕಾಗಿ ಬೆಂಗಳೂರಿಗೆ: ಅಸ್ವಿದ್ ಹುಟ್ಟಿದ್ದು ಗಲ್ಫ್ ರಾಷ್ಟ್ರದಲ್ಲಿ, ಪಿಯುಸಿವರೆಗೆ ಅಲ್ಲೇ ಕಲಿತಿದ್ದಾರೆ. ಆತನ ತಂದೆ ಮತ್ತು ತಾಯಿಯೂ ಗಲ್ಫ್‌ನಲ್ಲೇ ಇದ್ದಾರೆ. ಡಿಗ್ರಿಯನ್ನು ಮಂಗಳೂರಿನ ಕಾಲೇಜಿನಲ್ಲಿ ಪೂರೈಸಿದ್ದ ಅಸ್ವಿದ್ ಕೆಲಸ ಹುಡುಕುತ್ತಿದ್ದರು. ಹಲ್ಲೆಗೊಳಗಾದ ಯುವತಿ ಮತ್ತು ಅಸ್ವಿದ್ ಕ್ಲಾಸ್‌ಮೇಟ್‌ಗಳು. ಆಕೆಯೂ ಕೆಲಸ ಹುಡುಕುತ್ತಿದ್ದರು. ಆಕೆಗೆ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಲು ಸಂದರ್ಶನದ ಕರೆ ಬಂದಿತ್ತು. ಬೆಂಗಳೂರು ಬಗ್ಗೆ ಹೆಚ್ಚು ಪರಿಚಯವಿಲ್ಲದ ಕಾರಣ ಪರಿಚಯದ ಅಸ್ವಿದ್‌ನನ್ನು ಜೊತೆಯಾಗಿ ಬರುವಂತೆ ಆಹ್ವಾನಿಸಿದ್ದರು. ಅದರಂತೆ ಇಬ್ಬರು ಜೊತೆಯಾಗಿ ಹೋಗುವಾಗ ಈ ಕೃತ್ಯ ನಡೆದಿದೆ ಎಂದು ಅಸ್ವಿದ್‌ನ ಸಂಬಂಧಿಕರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಯುವಕ ಮತ್ತು ಯುವತಿ ಬಿಜೈನಲ್ಲಿ ಬೆಂಗಳೂರಿಗೆ ತೆರಳಲು ಖಾಸಗಿ ಬಸ್ಸನ್ನೇರಿದ್ದರು. ಬಸ್ ಪಂಪ್‌ವೆಲ್ ತಲುಪಿದಾಗ ತಂಡವೊಂದು ಸಂಬಂಧಿಕರಿಗೆ ಹುಷಾರಿಲ್ಲ, ಅವರಿಗೆ ಉಪಚಾರ ಮಾಡಬೇಕಾಗಿದೆ ಎಂದು ಹೇಳಿ ಬಸ್ಸನ್ನೇರಿತ್ತು. ಬಳಿಕ ಬಸ್‌ನಲ್ಲಿ ಜೊತೆಯಾಗಿದ್ದ ಯುವಕ ಮತ್ತು ಯುವತಿಯನ್ನು ಕೆಳಗೆ ಇಳಿಸಿ ಯುವಕ ಮತ್ತು ಯುವತಿಗೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಯುವಕನಿಗೆ ಚೂರಿಯಿಂದ ಇರಿದ್ದರು. ಗಾಯಗೊಂಡ ಯುವಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಯುವತಿ ನೀಡಿದ ದೂರಿನಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಕೊಲೆಯತ್ನ ಪ್ರಕರಣ ದಾಖಲಾಗಿದೆ.
ಯುವತಿಯನ್ನು ಪೋಷಕರಿಗೆ ವಶಕ್ಕೆ ಒಪ್ಪಿಸಲಾಗಿದೆ. ಘಟನೆಗೆ ಸಂಬಂಧಿಸಿ ಡಿಸಿಪಿ ಮತ್ತು ಎಸಿಪಿ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ. ಘಟನೆಯಲ್ಲಿ ನೇರವಾಗಿ ಭಾಗಿಯಾದವರನ್ನು ಬಂಧಿಸಿ ಕೊಲೆ ಯತ್ನ ಕೇಸು ದಾಖಲಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಆಯ್ದ ಸ್ಥಳಗಳಲ್ಲಿ ಪ್ಯಾಟ್ರೋಲಿಂಗ್: ಇಂತಹ ಘಟನೆಯನ್ನು ತಡೆಯಲು ಸಂಜೆ ಮತ್ತು ರಾತ್ರಿ ವೇಳೆ ಪ್ಯಾಟ್ರೋಲಿಂಗ್ ಮತ್ತು ಅಬ್ಬಕ್ಕ ಪಡೆಯನ್ನು ಬಸ್ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ನಿಯೋಜಿಸುವ ಮೂಲಕ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ನಿಗಾ ವಹಿಸಲಾಗುವುದು ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದರು.
ನೈತಿಕತೆಯ ಹೆಸರಿನಲ್ಲಿ ದುಷ್ಕರ್ಮಿಗಳು ಕಾನೂನು ಕೈಗೆತ್ತಿಕೊಂಡ ಆರೋಪ ಕೇಳಿ ಬಂದಿದೆ. ಒಂದು ವಾರದಲ್ಲಿ ಜಿಲ್ಲೆಯ್ ಸುರತ್ಕಲ್, ಬೆಳ್ತಂಗಡಿ, ಪಂಪ್‌ವೆಲ್ ಬಳಿ ದುಷ್ಕರ್ಮಿಗಳು ಅಟ್ಟಹಾಸ ಮೆರೆಯುತ್ತಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.