ಯೆಮನ್ ತಲುಪಿದ ಭಾರತದ 3.6 ಲಕ್ಷ ಡೋಸ್ ಕೊರೋನ ಲಸಿಕೆ

Update: 2021-04-02 16:49 GMT

 ವಿಶ್ವಸಂಸ್ಥೆ, ಎ. 2: ಭಾರತದಲ್ಲಿ ತಯಾರಾದ 3,60,000 ಕೊರೋನ ವೈರಸ್ ಲಸಿಕೆಯ ಡೋಸ್‌ಗಳನ್ನೊಳಗೊಂಡ ಸರಕು ಯೆಮನ್ ತಲುಪಿದ್ದು, ಕೊರೋನ ವೈರಸ್ ವಿರುದ್ಧದ ದೇಶದ ಹೋರಾಟದಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ವಿಶ್ವಸಂಸ್ಥೆಯ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಒಟ್ಟು 19 ಲಕ್ಷ ಲಸಿಕಾ ಡೋಸ್‌ಗಳು ಈ ವರ್ಷ ವಿಶ್ವ ಆರೋಗ್ಯ ಸಂಸ್ಥೆಯ ಕೋವ್ಯಾಕ್ಸ್ ಕಾರ್ಯಕ್ರಮದ ಮೂಲಕ ಯೆಮನ್‌ಗೆ ಪೂರೈಕೆಯಾಗಲಿದ್ದು, ಮೊದಲ ಹಂತದಲ್ಲಿ 3,60,000 ಡೋಸ್‌ಗಳನ್ನು ಬುಧವಾರ ರವಾನಿಸಲಾಗಿದೆ ಎಂದು ಯುನಿಸೆಫ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಈ ಲಸಿಕೆಯು ಆ್ಯಸ್ಟ್ರಝೆನೆಕ-ಆಕ್ಸ್‌ಫರ್ಡ್ ಲಸಿಕೆಯಾಗಿದ್ದು, ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದನೆಯಾಗಿದೆ.

 ಮೊದಲ ಹಂತದ ಲಸಿಕಾ ಕಾರ್ಯಕ್ರಮದಲ್ಲಿ ಮುಂಚೂಣಿಯ ಆರೋಗ್ಯ ಕಾರ್ಯಕರ್ತರು ಮತ್ತು ಇತರ ಆದ್ಯತಾ ಗುಂಪುಗಳ ಸದಸ್ಯರಿಗೆ ಲಸಿಕೆ ನೀಡಲಾಗುವುದು.

ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯುನಿಸೆಫ್) ಪ್ರತಿನಿಧಿ ಫಿಲಿಪ್ ಡ್ವಾಮೆಲ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ. ಆದಮ್ ಇಸ್ಮಾಯಿಲ್ ಏಡನ್‌ನಲ್ಲಿ ಲಸಿಕೆಯ ಸರಕನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಯೆಮನ್‌ನ ಆರೋಗ್ಯ ಸಚಿವ ಡಾ. ಕಾಸಿಮ್ ಬುಹೈಬೀ ಮತ್ತು ಅವರ ಸಹಾಯಕ ಸಚಿವ ಡಾ. ಅಲಿ ಅಲ್ವಲೀದಿ ಉಪಸ್ಥಿತರಿದ್ದರು.

‘‘ಕೋವಿಡ್-19 ಲಸಿಕೆಯ ಆಗಮನವು ಯೆಮನ್ ಪಾಲಿಗೆ ಪ್ರಮುಖ ಮೈಲಿಗಲ್ಲಾಗಿದೆ’’ ಎಂದು ಯುನಿಸೆಫ್ ಪ್ರತಿನಿಧಿ ಫಿಲಿಪ್ ಡ್ವಾಮೆಲ್ ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News