ಮ್ಯಾನ್ಮಾರ್: 40ಕ್ಕೂ ಅಧಿಕ ಮಕ್ಕಳ ಸಾವು: ಸೇನಾಡಳಿತಕ್ಕೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ನಿಂದನೆ

Update: 2021-04-02 17:18 GMT

ಯಾಂಗನ್ (ಮ್ಯಾನ್ಮಾರ್), ಎ. 2: ಸೈನಿಕರ ದಮನ ಕಾರ್ಯಾಚರಣೆಯಲ್ಲಿ 40ಕ್ಕೂ ಅಧಿಕ ಮಕ್ಕಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮ್ಯಾನ್ಮಾರ್‌ನ ಸೇನಾ ಸರಕಾರವು ಶುಕ್ರವಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೊಳಗಾಗಿದೆ. ಅದೂ ಅಲ್ಲದೆ, ನೂರಾರು ಜನರು ನಾಪತ್ತೆಯಾಗಿದ್ದು, ಸೇನೆಯ ವಿರುದ್ಧ ಜನರ ಆಕ್ರೋಶ ಹೆಚ್ಚಿದೆ.

ಫೆಬ್ರವರಿ 1ರಂದು ಕ್ಷಿಪ್ರಕ್ರಾಂತಿಯ ಮೂಲಕ ಸೇನೆಯು ದೇಶದ ಸರಕಾರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ಬಳಿಕ ಪ್ರತಿಭಟನಕಾರರ ವಿರುದ್ಧ ಸೇನೆ ನಡೆಸಿರುವ ಅಮಾನುಷ ದಮನ ಕಾರ್ಯಾಚರಣೆಯಲ್ಲಿ 44 ಮಕ್ಕಳೂ ಸೇರಿದಂತೆ 543 ನಾಗರಿಕರು ಮೃತಪಟ್ಟಿದ್ದಾರೆ ಎಂದು ರಾಜಕೀಯ ಕೈದಿಗಳ ಸಹಾಯಕ ಸಂಘಟನೆ (ಎಎಪಿಪಿ) ಹೇಳಿದೆ.

ಪ್ರತಿಭಟನೆಯಲ್ಲಿ ತೊಡಗಿರುವ ಜನರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿವೆ ಹಾಗೂ ರಬ್ಬರ್ ಮತ್ತು ನೈಜ ಗುಂಡುಗಳನ್ನು ಹಾರಿಸಿವೆ. ಈವರೆಗೆ ಸುಮಾರು 2,700 ಜನರನ್ನು ಬಂಧಿಸಲಗಿದೆ.

ಇತ್ತೀಚಿನ ವಾರಗಳಲ್ಲಿ ಜನರ ಮೇಲೆ ಸೇನೆ ನಡೆಸುತ್ತಿರುವ ಹಿಂಸೆಯಲ್ಲಿ ಹೆಚ್ಚಳವಾಗಿದ್ದು, ಕಳೆದ 12 ದಿನಗಳಲ್ಲಿ ಮಕ್ಕಳ ಸಾವಿನ ಸಂಖ್ಯೆ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ ಎಂದು ಅಂತರ್‌ರಾಷ್ಟ್ರಿಯ ಸಂಘಟನೆ ‘ಸೇವ್ ದ ಚಿಲ್ಡ್ರನ್’ ಹೇಳಿದೆ.

‘‘ಮಕ್ಕಳನ್ನು ಗುರಿಯಾಗಿಸಿ ನಡೆಯುತ್ತಿರುವ ಭೀಕರ ದಾಳಿಗಳು ಮುಂದುವರಿಯುತ್ತಿರುವ ಬಗ್ಗೆ ನಾವು ಕಳವಳಗೊಂಡಿದ್ದೇವೆ. ಅಪಾಯದಿಂದ ಮಕ್ಕಳನ್ನು ರಕ್ಷಿಸಿ ಎಂಬುದಾಗಿ ನಾವು ಪದೇ ಪದೇ ಮನವಿಗಳನ್ನು ಮಾಡುತ್ತಿರುವ ಹೊರತಾಗಿಯೂ ಅವರ ಮೇಲಿನ ದಾಳಿಯಲ್ಲಿ ಹೆಚ್ಚಳವಾಗುತ್ತಿದೆ’’ ಎಂದು ಅದು ಹೇಳಿಕೆಯೊಂದರಲ್ಲಿ ತಿಳಿಸಿದೆ.

ನೂರಾರು ಜನರು ಮಾಯ: ಹ್ಯೂಮನ್ ರೈಟ್ಸ್ ವಾಚ್ ಆರೋಪ

ಮ್ಯಾನ್ಮಾರ್‌ನ ಸೇನಾಡಳಿತವು ನೂರಾರು ಜನರನ್ನು ಮಾಯ ಮಾಡಿದೆ ಎಂದು ಅಂತರ್‌ರಾಷ್ಟ್ರೀಯ ಮಾನವಹಕ್ಕುಗಳ ಸಂಘಟನೆ ‘ಹ್ಯೂಮನ್ ರೈಟ್ಸ್ ವಾಚ್’ ಹೇಳಿದೆ. ಹೀಗೆ ನಾಪತ್ತೆಯಾದವರು ಎಲ್ಲಿದ್ದಾರೆ ಎನ್ನುವುದನ್ನು ಅದು ತಿಳಿಸುತ್ತಿಲ್ಲ ಹಾಗೂ ವಕೀಲರು ಅವರನ್ನು ಸಂಪರ್ಕಿಸಲು ಬಿಡುತ್ತಿಲ್ಲ ಎಂದು ಅದು ಆರೋಪಿಸಿದೆ.

  ‘‘ಕ್ಷಿಪ್ರಕ್ರಾಂತಿ ವಿರುದ್ಧದ ಹೋರಾಟಗಾರರ ಹೃದಯದಲ್ಲಿ ಭೀತಿ ಹುಟ್ಟಿಸುವುದಕ್ಕಾಗಿ ಸೇನಾ ಸರಕಾರವು ಜನರನ್ನು ಸ್ಚೇಚ್ಚಾಚಾರದಿಂದ ಬಂಧಿಸುತ್ತಿದೆ ಹಾಗೂ ಅವರನ್ನು ಮಾಯ ಮಾಡುತ್ತಿದೆ’’ ಎಂದು ಹ್ಯೂಮನ್‌ರೈಟ್ಸ್ ವಾಚ್‌ನ ಏಶ್ಯಾ ನಿರ್ದೇಶಕ ಬ್ರಾಡ್ ಆ್ಯಡಮ್ಸ್ ಹೇಳಿದರು.

ವಯರ್‌ಲೆಸ್ ಸೇವೆ ನಿಲುಗಡೆಗೆ ಸೇನಾ ಸರಕಾರ ಆದೇಶ

ಮ್ಯಾನ್ಮಾರ್‌ನ ವಯರ್‌ಲೆಸ್ ಸೇವೆಗಳನ್ನು ನಿಲ್ಲಿಸುವಂತೆ ದೇಶದ ಸೇನಾ ಸರಕಾರ ಇಂಟರ್‌ನೆಟ್ ಪೂರೈಕೆದಾರ ಕಂಪೆನಿಗಳಿಗೆ ಆದೇಶ ನೀಡಿದೆ ಎಂದು ದೂರಸಂಪರ್ಕ ಕಂಪೆನಿ ಊರೆಡೂ ಹೇಳಿದೆ.

‘‘ನಾಳೆಯಿಂದ ಫೈಬರ್‌ಲೈನ್ ಸೇವೆಗಳು ಮಾತ್ರ ಚಾಲನೆಯಲ್ಲಿರುತ್ತವೆ’’ ಎಂದು ಕಂಪೆನಿಯು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದೆ. ‘‘ಇದಕ್ಕೆ ಸಂಬಂಧಿಸಿದ ಸೂಚನೆಗಳನ್ನು ನಮಗೆ ಇತ್ತೀಚೆಗೆ ನೀಡಲಾಗಿದೆ’’ ಎಂದು ಅದು ಹೇಳಿದೆ.

ಮ್ಯಾನ್ಮಾರ್‌ನಲ್ಲಿ ಫೈಬರ್ ಲೈನ್ ಇಂಟರ್‌ನೆಟ್ ಸೇವೆಗಳನ್ನು ಹೊಂದಿರುವವರ ಸಂಖ್ಯೆ ಅತ್ಪಲ್ಪವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News