ಡೆಲ್ಲಿ ಕ್ಯಾಪಿಟಲ್ಸ್ ಆಲ್ ರೌಂಡರ್ ಅಕ್ಷರ್ ಪಟೇಲ್ ಗೆ ಕೊರೋನ ಪಾಸಿಟಿವ್

Update: 2021-04-03 11:32 GMT

ಹೊಸದಿಲ್ಲಿ: ಐಪಿಎಲ್ ಟೂರ್ನಿ ಆರಂಭವಾಗಲು ದಿನಗಣನೆ ಆರಂಭವಾಗಿರುವಂತೆಯೇ ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ)ಶನಿವಾರ ತೀವ್ರ ಹಿನ್ನಡೆ ಅನುಭವಿಸಿದ್ದು, ಟೂರ್ನಿಯಲ್ಲಿ ಭಾಗಿಯಾಗಲಿರುವ ಹಲವರಿಗೆ ಕೊರೋನ ವೈರಸ್ ಬಾಧಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಆಲ್ ರೌಂಡರ್ ಅಕ್ಷರ್ ಪಟೇಲ್ ಕೊರೋನ ಪಾಸಿಟಿವ್ ಆಗಿದ್ದು, ಮುಂಬೈನ ವಾಂಖೆಡೆ ಸ್ಟೇಡಿಯಂನ 10 ಮೈದಾನ ಸಿಬ್ಬಂದಿಗಳು ಹಾಗೂ ಬಿಸಿಸಿಐನ ಐಪಿಎಲ್ ಆಯೋಜನಾ ತಂಡದಲ್ಲಿರುವ 7 ಸದಸ್ಯರಿಗೂ ಕೊರೋನ ಸೋಂಕು ತಗಲಿರುವುದು ದೃಢಪಟ್ಟಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂ ಎ.10ರಂದು ಈ ವರ್ಷದ  ಐಪಿಎಲ್ ನ ಎರಡನೇ ಪಂದ್ಯದ ಆತಿಥ್ಯವಹಿಸಲು ಸಜ್ಜಾಗಿದೆ.

ಮುಂಬೈನಿಂದ ಐಪಿಎಲ್ ಪಂದ್ಯವನ್ನು ಸ್ಥಳಾಂತರಗೊಳಿಸಲು ಈಗ ಸಾಧ್ಯವಿಲ್ಲ. ಸಂಘಟನಾ ತಂಡದ ಸದಸ್ಯರುಗಳನ್ನು ಪ್ರತ್ಯೇಕವಾಗಿಡಲಾಗಿದೆ. ಆಟಗಾರರಿಗೆ ಕಟ್ಟುನಿಟ್ಟಾಗಿ ಸುರಕ್ಷಿತ  ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಿಲ್ಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಎ.28ರಂದು ಮೊದಲ ಪಂದ್ಯದ ಆತಿಥ್ಯವಹಿಸಲಿದ್ದು, ಇಡೀ ಸಿಬ್ಬಂದಿಗೆ ಉಚಿತ ಲಸಿಕೆ ನೀಡಿಕೆ ಅಭಿಯಾನವನ್ನು ಈಗಾಗಲೇ ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News