ಐಟಿ ದಾಳಿ ನಡೆಸಿದ್ದರಿಂದ ಡಿಎಂಕೆಗೆ 'ಒಳ್ಳೆಯ ಪ್ರಚಾರ' ಲಭಿಸಿತು: ಉದಯನಿಧಿ ಸ್ಟಾಲಿನ್

Update: 2021-04-03 12:20 GMT

ಚೆನ್ನೈ: ಇತ್ತೀಚೆಗೆ ಡಿಎಂಕೆ ನಾಯಕ ಎಂ.ಕೆ ಸ್ಟಾಲಿನ್ ಅವರ ಮಗಳು, ಅಳಿಯ  ಹಾಗೂ ಇತರ ಪಕ್ಷ ನಾಯಕರ ನಿವಾಸಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿಯು ತಮ್ಮ ಪಕ್ಷಕ್ಕೆ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ 'ಒಳ್ಳೆಯ ಪ್ರಚಾರ' ಒದಗಿಸಿದೆ ಎಂದು ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

ಐಟಿ ದಾಳಿಗಳ ವೇಳೆ ರೂ 1.36 ಲಕ್ಷ ಹಣ ಪತ್ತೆಯಾಗಿದ್ದರೂ ಅದು ಸಕ್ರಮವೆಂದು ತಿಳಿದು ಬಂದ ನಂತರ ಮರಳಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. "ಐಟಿ ದಾಳಿಗಳು ಡಿಎಂಕೆಗೆ ಉಚಿತ ಪ್ರಚಾರ ನೀಡಿದೆ. ಈ ದಾಳಿಗಳು ಪಕ್ಷವನ್ನು ಅಲುಗಾಡಿಸಿಲ್ಲ" ಎಂದು ಉದಯನಿಧಿ ಹೇಳಿದರು.

ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿದ  ಉದಯನಿಧಿ, ಅದೇ ಸಮಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ಸಂಪತ್ತಿನ ಗಣನೀಯ ಏರಿಕೆಯನ್ನೂ ಪ್ರಶ್ನಿಸಿದ್ದಾರಲ್ಲದೆ "ಅವರ ಆದಾಯ ರೂ 15,000ದಿಂದ ರೂ 120 ಕೋಟಿಗೆ  ಏರಿಕೆಯಾಗಿದೆ" ಎಂದು ಹೇಳಿದರು.

ಇತ್ತೀಚೆಗೆ ರ್ಯಾಲಿಯೊಂದರಲ್ಲಿ ಪ್ರಧಾನಿ ಮೋದಿ ಅವರು ಉದಯನಿಧಿಯನ್ನು ಪರೋಕ್ಷವಾಗಿ ಯುವರಾಜ ಎಂದು ಉಲ್ಲೇಖಿಸಿದಂದಿನಿಂದ ಉದಯನಿಧಿ ಅವರು ಪ್ರಧಾನಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಲೇ ಬಂದಿದ್ದಾರೆ. "ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡುತ್ತಿದ್ದೇನೆ" ಎಂದು ಮೊದಲ ಬಾರಿ ಚುನಾವಣೆ ಸ್ಪರ್ಧಿಸುತ್ತಿರುವ ಉದಯನಿಧಿ ಹೇಳಿದರು.

ಡಿಎಂಕೆ ವಂಶ ರಾಜಕಾರಣ ನಡೆಸುತ್ತಿದೆ ಎಂಬ ಪ್ರಧಾನಿಯ ಟೀಕೆಗೆ ಪ್ರತಿಕ್ರಿಯಿಸಿದ ಅವರು "ಚಿಪಾಕ್-ತಿರುವಲ್ಲಿಕೆನ್ನಿಯ ಜನರು ನಿರ್ಧರಿಸಲಿ, ನಾವು ಪ್ರಚಂಡ ಬಹುಮತದಿಂದ ಗೆಲ್ಲುತ್ತೇವೆ" ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News