50 ದಿನದೊಳಗೆ 4,300 ಕಿ.ಮೀ. ಓಟ: ಗಿನ್ನೆಸ್ ವಿಶ್ವದಾಖಲೆಗೆ ಭಾರತದ ಯೋಧನ ಪ್ರಯತ್ನ

Update: 2021-04-03 17:49 GMT
Photo: twitter.com/Buntymahajan6

ಜಮ್ಮು, ಎ.3: ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ 4,300 ಕಿ.ಮೀ ದೂರವನ್ನು 50 ದಿನದೊಳಗೆ ಓಡಿ ಕ್ರಮಿಸುವ ಮೂಲಕ ಭಾರತದ ಯೋಧ ವೇಲು ಪಿ. ಗಿನ್ನೆಸ್ ವಿಶ್ವದಾಖಲೆ ಪುಸ್ತಕದಲ್ಲಿ ತನ್ನ ಹೆಸರನ್ನು ಸೇರಿಸಲು ಪ್ರಯತ್ನ ನಡೆಸಲಿದ್ದಾರೆ ಎಂದು ಸೇನಾಪಡೆಯ ಮೂಲಗಳು ಹೇಳಿವೆ.

ವೇಲು ಕಳೆದ ವರ್ಷದ ಜೂನ್‌ನಲ್ಲಿ ಕೇವಲ 17 ದಿನದಲ್ಲಿ 1,600 ಕಿ.ಮೀ ದೂರ ಓಡಿದ ಮೊದಲ ಭಾರತೀಯ ದೂರ ಓಟಗಾರ ಎಂಬ ದಾಖಲೆ ಬರೆದಿದ್ದರು. ಇದು ಏಶ್ಯಾದಲ್ಲೇ ಹೊಸ ದಾಖಲೆ ಎಂಬ ಮಾನ್ಯತೆಗೆ ಪಾತ್ರವಾಗಲಿದೆ. 60 ಪ್ಯಾರಾ ಫೀಲ್ಡ್ ಆಸ್ಪತ್ರೆಯಲ್ಲಿ ನರ್ಸಿಂಗ್ ಅಸಿಸ್ಟೆಂಟ್ ಆಗಿರುವ ವೇಲು 50 ದಿನದೊಳಗೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ 4,300 ಕಿ.ಮೀ. ದೂರವನ್ನು ಓಡಿ ಕ್ರಮಿಸುವ ಅಭಿಯಾನಕ್ಕೆ ಎ.2ರಂದು ಶ್ರೀನಗರದ 92 ಬೇಸ್ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಗಿದೆ. ಆರಂಭದ 5 ಕಿ.ಮೀ ಓಟದಲ್ಲಿ ಸ್ಥಳೀಯ ಉತ್ಸಾಹಿಗಳು ರಾಷ್ಟ್ರಧ್ವಜ ಹಿಡಿದು ಪಾಲ್ಗೊಂಡು ಹುರುಪು ತುಂಬಿದರು ಎಂದು ಉಧಾಂಪುರ ಸೇನಾನೆಲೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಲೆ.ಕ. ಅಭಿನವ್ ನವನೀತ್ ಹೇಳಿದ್ದಾರೆ.

ಗಂಟೆಗೆ 10 ಕಿ.ಮೀ ದೂರ ಕ್ರಮಿಸಿ ಪ್ರಮುಖ ರಾಜ್ಯ, ನಗರಗಳ ಮೂಲಕ ಪ್ರತೀ ದಿನ 70ರಿಂದ 100 ಕಿ.ಮೀ. ಓಡುವ ಮೂಲಕ ಉದ್ದೇಶಿತ ಗುರಿ ತಲುಪುವ ಯೋಜನೆಯಿದೆ. ವೇಲು ಹಲವು ಮ್ಯಾರಥಾನ್ ಓಟ ಹಾಗೂ ಇತರ ದೀರ್ಘ ದೂರದ ಓಟದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಶನಿವಾರ ಉಧಂಪುರ ಕೇಂದ್ರ ನೆಲೆ ತಲುಪಿದ್ದ ವೇಲು ಬಳಿಕ ಜಮ್ಮುವಿನತ್ತ ಮುಂದುವರಿದಿದ್ದಾರೆ. 2016ರಿಂದ ದೂರ ಓಟದಲ್ಲಿ ಭಾರತದ ತಂಡವನ್ನು ಪ್ರತಿನಿಧಿಸುತ್ತಿರುವ ವೇಲು, ರೊಮಾನಿಯಾದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ನವನೀತ್ ಹೇಳಿದ್ದಾರೆ.

ತಮಿಳುನಾಡು ಮೂಲದ ವೇಲು, 13ನೇ ವಯಸ್ಸಿನಲ್ಲೇ ರಾಜ್ಯ ಕ್ರೀಡಾಕೂಟ ತಂಡದಲ್ಲಿ ಸ್ಥಾನ ಪಡೆದಿದ್ದರು. 2011ರ ಡಿಸೆಂಬರ್‌ನಲ್ಲಿ ಸೇನಾಪಡೆಗೆ ಸೇರ್ಪಡೆಗೊಂಡ ವೇಲು, 2012ರಲ್ಲಿ ನಡೆದಿದ್ದ ಕ್ರಾಸ್‌ಕಂಟ್ರಿ ಓಟದಲ್ಲಿ ಸ್ವರ್ಣ ಪದಕ ಪಡೆದಿದ್ದರು. ಬಳಿಕ ದೀರ್ಘದೂರದ ಮ್ಯಾರಥಾನ್ ಓಟದತ್ತ ಗಮನ ಹರಿಸಿ ಹಲವು ಕ್ರೀಡಾಕೂಟದಲ್ಲಿ ಸೇನಾಪಡೆಯನ್ನು ಪ್ರತಿನಿಧಿಸಿ ಪದಕ ಗೆದ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News