×
Ad

ಏಕದಿನ ಕ್ರಿಕೆಟ್ ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಆಸ್ಟ್ರೇಲಿಯ ಮಹಿಳಾ ಕ್ರಿಕೆಟ್ ತಂಡ

Update: 2021-04-04 15:45 IST

ಮೆಲ್ಬೋರ್ನ್: ಬೇ ಓವಲ್ ನಲ್ಲಿ ರವಿವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು 6 ವಿಕೆಟ್ ಗಳಿಂದ ಮಣಿಸಿರುವ ಆಸ್ಟ್ರೇಲಿಯ ಮಹಿಳಾ ಕ್ರಿಕೆಟ್ ತಂಡ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿಶ್ವ ದಾಖಲೆ ನಿರ್ಮಿಸಿದೆ.

ನ್ಯೂಝಿಲ್ಯಾಂಡ್ ವಿರುದ್ಧ ಗೆಲುವಿನ ಮೂಲಕ ಆಸ್ಟ್ರೇಲಿಯವು ಏಕದಿನ ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಸಾರ್ವಕಾಲಿಕ ಶ್ರೇಷ್ಠ ದಾಖಲೆಯನ್ನು ಮುರಿದಿದೆ. 2003ರಲ್ಲಿ ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯ ಪುರುಷರ ತಂಡ ನಿರ್ಮಿಸಿದ್ದ ದಾಖಲೆಯನ್ನು ಹಿಂದಿಕ್ಕಿದೆ.

ಆಸ್ಟ್ರೇಲಿಯವು ನ್ಯೂಝಿಲ್ಯಾಂಡ್ ವಿರುದ್ಧ ಸತತ 22ನೇ ಗೆಲುವು ದಾಖಲಿಸಿತು. 2017ರ ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯ ಮಹಿಳಾ ತಂಡವು ಕೊನೆಯ ಬಾರಿ ಸೋಲನುಭವಿಸಿತ್ತು.

2003ರಲ್ಲಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯದ ಪುರುಷರ  ಏಕದಿನ ಕ್ರಿಕೆಟ್ ತಂಡವು ಸತತ 21 ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿತ್ತು.

ಆಸ್ಟ್ರೇಲಿಯದ ಅಜೇಯ ಗೆಲುವಿನ ಓಟವು 2018ರ ಮಾರ್ಚ್ 12ರಂದು ಭಾರತದ ವಿರುದ್ಧ ಆರಂಭವಾಗಿತ್ತು. ಆಗ 3-0 ಅಂತರದಿಂದ ಸರಣಿ ಜಯಿಸಿತ್ತು. ಆ ನಂತರ ಪಾಕಿಸ್ತಾನ(3-0),ನ್ಯೂಝಿಲ್ಯಾಂಡ್(3-0), ಇಂಗ್ಲೆಂಡ್(3-0), ವೆಸ್ಟ್ ಇಂಡೀಸ್(3-0), ಶ್ರೀಲಂಕಾ(3-0),  ನ್ಯೂಝಿಲ್ಯಾಂಡ್(3-0) ಹಾಗೂ ಇದೀಗ ನಡೆಯುತ್ತಿರುವ ನ್ಯೂಝಿಲ್ಯಾಂಡ್ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 

ರವಿವಾರ ನಡೆದಿದ್ದ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಿ ಆಸ್ಟ್ರೇಲಿಯಕ್ಕೆ 213 ರನ್ ಗುರಿ ನೀಡಿತು. ಅಲಿಸ್ಸಾ ಹೀಲಿ(65, 68 ಎಸೆತ), ಎಲ್ಲಿಸ್ ಪೆರ್ರಿ(ಔಟಾಗದೆ 56) ಹಾಗೂ ಅಶ್ಲೆ ಗಾರ್ಡ್‍ನೆರ್(53, 41 ಎಸೆತ) ಅರ್ಧಶತಕದ ನೆರವಿನಿಂದ ಪ್ರವಾಸಿ ಆಸ್ಟ್ರೇಲಿಯವು 38.3 ಓವರ್ ಗಳಲ್ಲಿ ಜಯ ಸಾಧಿಸಿತ್ತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News